Thursday, May 9, 2024

ಅಶೋಕ್ ಒಬ್ಬ ಅಯೋಗ್ಯ, ನಾಲಾಯಕ್ : ಪ್ರಮೋದ್ ಮುತಾಲಿಕ್

ಉಡುಪಿ : ವಿಪಕ್ಷ ನಾಯಕ ಹುದ್ದೆಗೆ ಆರ್. ಅಶೋಕ್ ಅಯೋಗ್ಯ, ನಾಲಾಯಕ್ ಎಂದು ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರ್ .ಅಶೋಕ್​ ಅವರನ್ನು ವಿಪಕ್ಷ ನಾಯಕ ಹುದ್ದೆಯಿಂದ ತೆಗೆದು ಹಾಕಬೇಕು ಎಂದು ಕುಟುಕಿದರು.

ಶ್ರೀರಾಮ ಸೇನೆ ಕಾರ್ಯಕರ್ತರಿಂದ ಮಂಗಳೂರು ಪಬ್ ದಾಳಿ ನಡೆದಿತ್ತು. ಆ ಸಂದರ್ಭದಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಯಾವುದೇ ಗುಂಡಾ ಕಾಯ್ದೆ ಹಾಕಿಲ್ಲ. ಹಿಂದೂ ಕಾರ್ಯಕರ್ತರ ಮೇಲೆ ಗೂಂಡಾ ಆಕ್ಟ್ ಪ್ರಥಮ ಬಾರಿ ಹಾಕಿದವರೇ ಆರ್. ಅಶೋಕ್. ಕಾಂಗ್ರೆಸ್​ನವರು ಯಾವತ್ತೂ ಹಿಂದೂ ಕಾರ್ಯಕರ್ತರ ಮೇಲೆ ಗುಂಡಾ ಆಕ್ಟ್ ಹಾಕಿಲ್ಲ ಎಂದು ಹೇಳಿದರು.

ಇದು ಹಿಂದೂಗಳಿಗೆ ಅಶೋಕ್ ಕೊಟ್ಟ ಕೊಡುಗೆ

ಈ ವಿಚಾರವನ್ನು ನಾನೇ ಅಶೋಕ್​ಗೆ ಹೇಳಿದ್ದೆ. ಅಶೋಕ್ ನಂತರ ಕಾಂಗ್ರೆಸ್​ನವರು ಕೂಡ ಗೂಂಡಾ ಕಾಯ್ದೆ ಹಾಕಿದ್ದಾರೆ. ಇದು ಹಿಂದೂ ಕಾರ್ಯಕರ್ತರಿಗೆ ಅಶೋಕ್ ಕೊಟ್ಟ ಕೊಡುಗೆ. ಅಶೋಕ ಗೃಹ ಸಚಿವರಾಗಿದ್ದಾಗ ಪಿಎಫ್​ಐ ಗಲಾಟೆ ಮಾಡಿತ್ತು. ಆದರೆ, ಈ ಬಗ್ಗೆ ಗೃಹ ಸಚಿವರಾಗಿ ಅಶೋಕ್ ಒಂದೇ ಒಂದು ಪತ್ರ ಕೇಂದ್ರಕ್ಕೆ ಬರೆದಿಲ್ಲ ಎಂದು ಆರೋಪಿಸಿದರು.

ಅಶೋಕ್ ಮತ್ತು ಜಮೀರ್ ಜೋಡಿಗಳು

ಅಶೋಕ್ ಮತ್ತು ಸಚಿವ ಜಮೀರ್ ಅಹಮದ್ ಜೋಡಿಗಳು. ಚಾಮರಾಜಪೇಟೆಯಲ್ಲಿ ಗಣಪತಿ ಇಡದೆ ಇರಲು ಕಾರಣವೇ ಅಶೋಕ್. ಸರಿಯಾಗಿ ವಾದಮಂಡನೆ ಮಾಡದೆ ಸಹಕಾರ ಕೊಡದಿರುವುದರಿಂದ ಹೀಗಾಗಿದೆ. ಅಶೋಕ್ ತಮ್ಮ ಬಾಯಿಯಿಂದಲೇ ಬಣ್ಣ ಬಯಲು ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಅಶೋಕ್ ಹಿಂದೂಗಳಿಗೆ ಬೆಂಬಲ ಕೊಟ್ಟಿಲ್ಲ

ಮಂಡ್ಯದಲ್ಲಿ ಬಿಜೆಪಿ ಒಂದೇ ಒಂದು ಸ್ಥಾನ ಗೆಲ್ಲದಿರಲು ಅಶೋಕ್ ಕಾರಣ. ಕರ್ನಾಟಕದ ಯಾವ ಜಿಲ್ಲೆಯಲ್ಲೂ ಅಶೋಕ್ ಹಿಂದೂಗಳಿಗೆ ಬೆಂಬಲ ಕೊಟ್ಟಿಲ್ಲ. ಈ ವಿಚಾರವನ್ನು ಖಂಡಿಸುತ್ತೇನೆ, ವಿರೋಧಿಸುತ್ತೇನೆ. ಕೂಡಲೇ ಅವರನ್ನು ವಿಪಕ್ಷ ಹುದ್ದೆಯಿಂದ ಅಮಾನತು ಮಾಡಲು ಪಕ್ಷಕ್ಕೆ ಒತ್ತಾಯ ಮಾಡುತ್ತೇನೆ ಎಂದು ಪ್ರಮೋದ್ ಮುತಾಲಿಕ್ ಹೇಳಿದರು.

RELATED ARTICLES

Related Articles

TRENDING ARTICLES