Tuesday, April 30, 2024

45 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ : ‘ಪವರ್’ ಟಿವಿ ವರದಿಗೆ ಎಚ್ಚೆತ್ತ ಕೊಪ್ಪಳ ಜಿಲ್ಲಾಡಳಿತ

ಕೊಪ್ಪಳ : ಅವರೆಲ್ಲ ದಲಿತ ಸಮುದಾಯಕ್ಕೆ ಸೇರಿದ್ದ ಅಲೆಮಾರಿ ಜನಾಂಗದ ಕುಟುಂಬಗಳು. ಆದ್ರೆ ಆಸ್ತಿ ವಿವಾದಕ್ಕೆ ಸಂಭವಿಸಿದಂತೆ ಕೋರ್ಟ್ ಮೆಟ್ಟಿಲೇರಿದಕ್ಕೆ ಆ 45 ಕುಟುಂಬಗಳಿಗೆ ಕುಲ ಬಹಿಷ್ಕಾರ ಶಿಕ್ಷೆ ವಿಧಿಸಲಾಗಿತ್ತು.

ಈ ಆಧುನಿಕ ಜಗತ್ತಲ್ಲೂ ಕುಲ ಪಂಚಾಯಿತಿ ಜೀವಂತವಾಗಿದ್ದು, ಈ ಅನಿಷ್ಟ ಪದ್ಧತಿ ವಿರೋಧಿಸಿ ಪವರ್ ಟಿವಿ ಸುದ್ದಿ ಪ್ರಸಾರ ಮಾಡಿತ್ತು. ಬಳಿಕ 45 ಕುಟುಂಬಗಳು ನಿಟ್ಟುಸಿರು ಬಿಡುವಂತಾಗಿದೆ.

ಉತ್ತರ ಕರ್ನಾಟಕದ ಸುಡಗಾಡು ಸಿದ್ದರು ಸಮುದಾಯದ 45 ಕುಟುಂಬಗಳು ತಮ್ಮ ಸಂಬಂಧಿಕರನ್ನು ಭೇಟಿ ಮಾಡಿ ತಿಂಗಳುಗಳೇ ಕಳೆದಿದೆ. ಏಕೆಂದರೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಡಗಾಡು ಸಿದ್ದರು ಸಮುದಾಯದ  45 ಕುಟುಂಬಗಳಿಗೆ ಸದಸ್ಯರೇ ಬಹಿಷ್ಕಾರ ಹಾಕಿದ್ದಾರೆ.

ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಸುಡಗಾಡು ಸಿದ್ದರ ಸಮುದಾಯ ಕೋರ್ಟ್​ ಮೆಟ್ಟಿಲೇರಿತ್ತು.. ಕೋರ್ಟ್​​ ಮೆಟ್ಟಿಲೇರಿರುವ ಹಿನ್ನೆಲೆ ಕುಲ ಪಂಚಾಯಿತಿ ಮುಖಂಡರು 45 ಕುಟುಂಬಗಳಿಗೆ ಬಹಿಷ್ಕಾರ ಶಿಕ್ಷೆ ವಿಧಿಸಿದ್ರು. ಬಹಿಷ್ಕಾರಕ್ಕೊಳಗಾದವರನ್ನು ಯಾರೂ ಮಾತನಾಡಿಸುವಂತಿಲ್ಲ. ಮಾತಾಡಿಸಿದವರಿಗೂ ದಂಡ ಹಾಕಲಾಗ್ತಿತ್ತು.

‘ಪವರ್​’ ವರದಿಗೆ ಸ್ಪಂದಿಸಿದ ಶಾಸಕರು

ಇನ್ನು ಪವರ್ ಟಿವಿ ಸುದ್ದಿ ಪ್ರಸಾರ ಮಾಡ್ತಿದ್ದಂತೆ ಶಾಸಕ ದೊಡ್ಡನಗೌಡ ಪಾಟೀಲ್​ ಎಚ್ಚೆತ್ತುಕೊಂಡಿದ್ದಾರೆ. ಪವರ್​ ಟಿವಿಯೊಂದಿಗೆ ಮಾತನಾಡಿದ ಶಾಸಕ ಸಮಸ್ಯೆ ಪರಿಹರಿಸುವ ಭರವಸೆ ನೀಡಿದ್ರು. ಸಮಸ್ಯೆ ಇತ್ಯರ್ಥ ಪಡಿಸಲು ಪವರ್​​ ಟಿವಿ ಡೆಡ್​​ಲೈನ್​ ನೀಡಿತ್ತು. ಬೆಳಗ್ಗೆ 11 ಗಂಟೆಗೆ ಸುದ್ದಿ ಪ್ರಸಾರ ಮಾಡಿದ ಕೆಲವೇ ಗಂಟೆಗಳಲ್ಲಿ ಶಾಸಕರು ಸ್ಥಳಕ್ಕೆ ಪೊಲೀಸ್ರ ಜೊತೆ ತೆರಳಿ ಸಮುದಾಯದ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇನ್ನು ಬಹಿಷ್ಕಾರ ಹಾಕಿದ್ದ ಸಮುದಾಯದ ಮುಖಂಡರು ಶಾಸಕರ ಮಾತಿಗೆ ಒಪ್ಪಿಗೆ ನೀಡಿ, ಬಹಿಷ್ಕಾರ ಪದ್ದತಿಯನ್ನು ಮುಂದುರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಒಟ್ಟಾರೆ, ಒಂದೂವರೆ ವರ್ಷಗಳ ಕಾಲ ಕುಲಪಂಚಾಯಿತಿ ನಿರ್ಧಾರದಿಂದ ಭಯದ ವಾತಾವರಣದಲ್ಲಿ ಬದುಕುತ್ತಿದ್ದ ಕುಟುಂಬಗಳು ನಿಟ್ಟುಸಿರು ಬಿಟ್ಟಿವೆ. ‘ಪವರ್’ ಟಿವಿ ವರದಿಗೆ ಶಿಘ್ರ ಸ್ಪಂದನೆ ನೀಡಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಿದ ಶಾಸಕ ದೊಡ್ಡನಗೌಡ ಪಾಟೀಲರಿಗೆ ನಮ್ಮ ಕಡೆಯಿಂದ ಧನ್ಯವಾದಗಳು.

RELATED ARTICLES

Related Articles

TRENDING ARTICLES