ಕಲಬುರಗಿ : ಮುಂಗಾರು ಆಗಮಿಸಿ ಹಲವು ದಿನಗಳೇ ಕಳೆದರೂ ಮಳೆಯ ಸುಳಿವೇ ಇಲ್ಲ. ಮಳೆಯಿಲ್ಲದೇ ಕಂಗಾಲಾಗಿರುವ ರೈತಾಪಿ ವರ್ಗ ಹಲವು ಸಂಪ್ರದಾಯಗಳ ಮೊರೆ ಹೋಗುತ್ತಿದೆ. ಅದರಂತೆ ಮಳೆಗಾಗಿ ಕತ್ತೆಗಳ ಮದುವೆ ಮಾಡಲಾಗಿದೆ.
ಕಲಬುರಗಿ ಜಿಲ್ಲೆ ಅಫಜಲಪುರ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಮಳೆಗಾಗಿ ಕತ್ತೆಗಳ ಮದುವೆ ಮಾಡಲಾಗಿದೆ. ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಮದುವೆ ಕಾರ್ಯ ನೆರವೇರಿಸಲಾಗಿದೆ.
ಇದನ್ನೂ ಓದಿ : ಕತ್ತೆಗಳಿಗೆ ಶಾಸ್ತ್ರೋಕ್ತ ಮದುವೆ ಮಾಡಿದ ಗ್ರಾಮಸ್ಥರು
ಗಂಡು ಕತ್ತೆಯ ಸಂಬಂಧಿಕರಾಗಿ ಮಲ್ಲಿಕಾರ್ಜುನ ದೇವಸ್ಥಾನದ ಕಮಿಟಿ ಆಗಮಿಸಿತ್ತು. ಇನ್ನು ಹೆಣ್ಣು ಕತ್ತೆಯ ಕುಟುಂಬದವರಾಗಿ ಶ್ರೀ ಭಾಗ್ಯವಂತಿ ದೇವಸ್ಥಾನದ ಕಮಿಟಿ ಆಗಮಿಸಿ ಸಂಪ್ರದಾಯದಂತೆ ವಿಧಿ ವಿಧಾನಗಳು ನಡೆಸಿಕೊಟ್ಟಿದ್ದಾರೆ.
ಪಕ್ಕದ ರಾಜ್ಯ ಮಹಾರಾಷ್ಟ್ರದ ಸೊಲ್ಲಾಪುರದಿಂದ ಎರಡು ಕತ್ತೆಗಳನ್ನು ಎಂಟು ಸಾವಿರ ರೂಪಾಯಿಗೆ ಖರೀದಿಸಿ ತಂದಿದ್ದು, ಮದುವೆಯ ನಂತರ ಮಲ್ಲಿಕಾರ್ಜುನ ದೇವಸ್ಥಾನದಿಂದ ಶ್ರೀ ಭಾಗ್ಯವಂತಿ ದೇವಸ್ಥಾನದ ವರೆಗೆ ಮೆರವಣಿಗೆ ಮಾಡಲಾಗಿದೆ. ಮದುವೆಗೆ ಬಂದಂತಹ ಸಂಬಂಧಿಗಳಿಗೆ ಸಿಹಿಯಾಗಿ ಕೇಸರಿಬಾತ್ ಹಾಗೂ ಅನ್ನ ಸಾಂಬಾರು ಮಾಡಲಾಗಿತ್ತು.
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭರ್ಜರಿ ಮಳೆಯಾಗಿದೆ. ಆದರೆ, ಕಲಬುರ್ಗಿ ಜಿಲ್ಲೆಯಲ್ಲಿ ಮಾತ್ರ ಮಳೆರಾಯನ ಆಗಮನವಾಗಿಲ್ಲ. ದೇಶದ ಪಶ್ಚಿಮ ಕರಾವಳಿಯಲ್ಲಿ ಅನಾಹುತ ಸೃಷ್ಟಿಸಿದ ಬಿಫರ್ ಜಾಯ್ ಚಂಡಮಾರುತ ಮುಂಗಾರು ಮಾರುತಗಳನ್ನು ಚದುರಿಸಿರುವ ಕಾರಣದಿಂದಾಗಿ, ರಾಜ್ಯಕ್ಕೆ ಮುಂಗಾರು ಪ್ರವೇಶ ವಿಳಂಬವಾಗಿದೆ.