ಬೆಂಗಳೂರು : ಗಂಗಾವತಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ನಿಂದ ವಂಚಿತರಾಗಿರುವ ಎಚ್.ಆರ್. ಶ್ರೀನಾಥ್ಗೆ ಜನಾರ್ಧನ ರೆಡ್ಡಿ ಗಾಳ ಹಾಕಿದ್ದಾರೆ.
ಹೌದು, ಎಚ್.ಆರ್. ಶ್ರೀನಾಥ್ಗೆ ಟಿಕೆಟ್ ಕೈತಪ್ಪುತ್ತಿದ್ದಂತೆಯೇ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಬಿಜೆಪಿ ಶಾಸಕರಾದ ಪರಣ್ಣ ಮುನವಳ್ಳಿ ಹಾಗೂ ಬಸವರಾಜ ದಢೇಸೂಗೂರು ಅವರು ನಿನ್ನೆ ಮಧ್ಯಾಹ್ನ ಶ್ರೀನಾಥ್ ಅವರನ್ನು ಭೇಟಿಯಾದ ಬೆನ್ನಲ್ಲೇ ಜನಾರ್ಧನ ರೆಡ್ಡಿ ಕೂಡ ಭೇಟಿ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶ್ರೀನಾಥ್ ಟಿಕೆಟ್ ಆಕಾಂಕ್ಷಿಯಾಗಿದ್ದಾಗ ಬೇರೆ ಯಾವ ಪಕ್ಷಗಳ ಯಾವ ನಾಯಕರೂ ಅವರನ್ನು ಭೇಟಿಯಾಗಿರಲಿಲ್ಲ, ಇದೀಗ ಟಿಕೆಟ್ ಕೈತಪ್ಪುತ್ತಿದ್ದಂತೆ ಬೇರೆ ಪಕ್ಷಗಳಿಂದ ಓಲೈಕೆ ಶುರುವಾಗಿದೆ. ರಾತ್ರೋರಾತ್ರಿ ಜನಾರ್ಧನ ರೆಡ್ಡಿ ಶ್ರೀನಾಥ್ ಮನೆಗೆ ಭೇಟಿ ನೀಡಿದ್ದಾರೆ. ಗಂಗಾವತಿ ಕ್ಷೇತ್ರಕ್ಕೆ ಕಾಂಗ್ರೆಸ್ನಿಂದ ಇಕ್ಬಾಲ್ ಅನ್ಸಾರಿಗೆ ಟಿಕೆಟ್ ಘೋಷಣೆ ಹಿನ್ನೆಲೆ ಶ್ರೀನಾಥ್ಗೆ ಟಿಕೆಟ್ ತಪ್ಪಿದೆ.
ಇದನ್ನೂ ಓದಿ: ಕಾಂಗ್ರೆಸ್ ಹೀನಾಯವಾಗಿ ಸೋಲಲಿದೆ : ಸಿಎಂ ಬೊಮ್ಮಾಯಿ ಭವಿಷ್ಯ
ಅಫಜಲಪುರದಲ್ಲಿ ಕೈ ನಾಯಕರ ಬಂಡಾಯ
ಕಲಬುರಗಿಯ ಅಫಜಲಪುರ ಕಾಂಗ್ರೆಸ್‌ನಲ್ಲಿ ಬಂಡಾಯದ ಬೇಗುದಿ ಭುಗಿಲೆದ್ದಿದೆ. ಅಫಜಲಪುರ ಕಾಂಗ್ರೆಸ್ ಟಿಕೆಟ್ ಎಂ.ವೈ. ಪಾಟೀಲ್‌ಗೆ ಸಿಕ್ಕ ಹಿನ್ನೆಲೆಯಲ್ಲಿ ಟಿಕೆಟ್ ವಂಚಿತರು ಬಂಡಾಯವೆದ್ದಿದ್ದಾರೆ. ಟಿಕೆಟ್ ವಂಚಿತರು ಬಹಿರಂಗ ಸಭೆ ನಡೆಸಿ, ಬಂಡಾಯದ ಬಾವುಟ ಹಾರಿಸಿದ್ದಾರೆ.
ಜೆ.ಎಂ. ಕೊರಬು, ರಾಜೇಂದ್ರ ಪಾಟೀಲ್ ಸೇರಿ ಕಾಂಗ್ರೆಸ್ ಮುಖಂಡರು ಸಭೆ ನಡೆಸಿದ್ದಾರೆ. ಅಫಜಲಪುರದ ಹೊರವಲಯದ ತೋಟದಲ್ಲಿ ಸಭೆ ನಡೆದಿದೆ. ಚುನಾವಣೆಯಲ್ಲಿ ಎಂ.ವೈ. ಪಾಟೀಲ್ ಪರ ಕೆಲಸ ಮಾಡದಿರಲು ಟಿಕೆಟ್ ವಂಚಿತರು ನಿರ್ಧರಿಸಿದ್ದಾರೆ.