Saturday, May 11, 2024

BBMP ಅಧಿಕಾರಿಗಳೇ ರಸ್ತೆ ಗುಂಡಿಗೆ ಇನ್ನೆಷ್ಟು ಬಲಿ ಬೇಕು.?

ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ರಸ್ತೆ ಗುಂಡಿಗಳ ರಾಜಧಾನಿಯಾಗುತ್ತಿದೆಯಾ? ಎನ್ನುವ ಅನುಮಾನ ಮೂಡುತ್ತಿದೆ.ಅತಿಯಾದ ಮಳೆ ಹಾಗೂ ಪಾಲಿಕೆಯ ಅಸಮರ್ಪಕ ರಸ್ತೆ ನಿರ್ವಹಣೆ ಕಾರಣದಿಂದಾಗಿ ರಾಜಧಾನಿ ರಸ್ತೆಗಳೆಲ್ಲ ಗುಂಡಿಮಯವಾಗಿವೆ ಹೈಕೋರ್ಟ್ ಪದೇ ಪದೆ ಚಾಟಿ ಬೀಸಿದ್ದರೂ ಯಾವುದೇ ಉಪಯೋಗ ಆಗಿಲ್ಲ. ಕಳೆದ ಹತ್ತು ತಿಂಗಳಿನಲ್ಲಿ 20 ಸಾವಿರ ರಸ್ತೆ ಗುಂಡಿ ಮುಚ್ಚಿದ್ದರೂ ನಗರ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ನಗರದ ರಸ್ತೆ ಗುಂಡಿಗಳಿಗೆ ಒಂದು ವರ್ಷದ ಅವಧಿಯಲ್ಲೇ 10 ಜನರನ್ನು ಬಲಿ ಪಡೆದುಕೊಂಡಿದೆ. ಇದೀಗ ಇದರ ಸಾಲಿಗೆ ಕಳೆದ ರಾತ್ರಿ ಯಲಹಂಕ ಅಟ್ಟೂರು ಲೇಔಟ್ನಲ್ಲಿ ಸಂಭವಿಸಿದ ಭೀಕರ ಘಟನೆಯೂ ಸೇರ್ಪಡೆ ಗೊಂಡಿದೆ‌.

ಹೌದು‌..ಕಳೆದ ಕೆಲ ದಿನಗಳ ಹಿಂದೆ ಸುಜಾತ ಚಿತ್ರಮಂದಿರದ ಸಮೀಪ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟಿಯಿಂದ ಆಯತಪ್ಪಿ ಬಿದ್ದ ಮಹಿಳೆ ಮೇಲೆ ಬಸ್ ಹರಿದು ಮೃತಪಟ್ಟ ಪ್ರಕರಣ ಮಾಸುವ ಮುನ್ನವೇ ಕಳೆದ ರಾತ್ರಿಯೂ ಯಲಹಂಕದ ಅಟ್ಟೂರು ಬಡಾವಣೆಯಲ್ಲಿ ರಸ್ತೆ ಗುಂಡಿ ಗಂಡಾಂತಕ್ಕೆ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಗುಂಡಿ ತಪ್ಪಿಸಲು ಹೋಗಿ ಕಾರೊಂದು ಪಲ್ಟಿಯಾಗಿದ್ದು, ಆ ಸಂದರ್ಭದಲ್ಲಿ ಮುಂದೆ ಬರುತ್ತಿದ್ದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದೆ, ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮತ್ತೋರ್ವ ಯುವಕನಿಗೆ ಗಂಭೀರ ಗಾಯಗಳಾಗಿವೆ.ಇದರ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಾಳಾದ, ಹೊಂಡಬಿದ್ದ ರಸ್ತೆಗುಂಡಿಗಳನ್ನ ಮುಚ್ಚಲು ನವೆಂಬರ್15 ರ ಗಡುವು ‌ನೀಡಲಾಗಿದ್ದರೂ ಕಳೆದ ರಾತ್ರಿ ರಸ್ತೆ ಗುಂಡಿಗೆ ಮತ್ತೊಂದು ಜೀವ ಬಲಿತೆಗೆದುಕೊಂಡಿದೆ. ನಗರದೆಲ್ಲಡೆ ರಸ್ತೆ ಗುಂಡಿ ಬಿದ್ದಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ‌.ಈ ನಡುವೆ ಇನ್ನೆಷ್ಟು ಬಲಿಯಾಗಬೇಕೋ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕ್ತಿದ್ದಾರೆ. ಮಳೆಗಾಲದಲ್ಲೂ ತ್ವರಿತಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ತಂತ್ರಜ್ಞಾನ ಲಭ್ಯವಿದೆ. ಆದರೆ, ಅದನ್ನು ಬಳಸಿಕೊಳ್ಳಲು ಬಿಬಿಎಂಪಿ ಮುಂದಾಗುತ್ತಿಲ್ಲ. ಹೀಗಾಗಿ ನಗರದೆಲ್ಲಡೆ ರಸ್ತೆ ಗುಂಡಿಗಳಿಗೆ ಜನ ಬಲಿಯಾಗ್ತಿದ್ದಾರೆ. ಕಳೆದ ರಾತ್ರಿ ಅಟ್ಟೂರು ಲೇಔಟ್ ನಲ್ಲಿ ರಸ್ತೆ ಗುಂಡಿಗೆ ಬಲಿಯಾಗಿದ್ರೂ ಇಲ್ಲಿಯವರೆಗೆ ಯಾರು ತಲೆಕೆಡಿಸಿಕೊಂಡಿಲ್ಲ.

ಒಟ್ಟಿನಲ್ಲಿ ಕಸದಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜಧಾನಿ ಮಾರ್ಯದೆ ಹಾಳಾಗಿದೆ. ಬ್ರ್ಯಾಂಡ್ ಬೆಂಗಳೂರು ಮಾನ ಉಳಿಸೋ ಪ್ರಯತ್ನ ನಡೆಯುತ್ತಿಲ್ಲ. ಪಾಲಿಕೆ ಗುಂಡಿ ಮುಚ್ಚುತ್ತೇವೆ ಮುಚ್ಚತ್ತೇವೆ ಅಂತ ವಾಹನ ಸವಾರರ ಜೊತೆ ಚೆಲ್ಲಾಟ ಆಡ್ತಿದೆ. ಭಾರಿ ಮಳೆಯಿಂದ ಗುಂಡಿಗಳು ಬಿದ್ದು ಹಲವು ಮಂದಿ ಪ್ರಾಣವನ್ನ ಕಳೆದುಕೊಂಡಿದ್ದಾರೆ ಆದರೂ ಎಚ್ಚೆತ್ತುಕೊಳ್ಳದ ಪಾಲಿಕೆ ಗುಂಡಿ ಮುಚ್ಚುವ ನೆಪದಲ್ಲಿ ಜನರ ಜೊತೆ ಚೆಲ್ಲಾಟ ಆಡ್ತಿರೋದು ದುರಂತವೇ ಸರಿ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES