Thursday, December 19, 2024

ಐತಿಹಾಸಿಕ ಸಹಸ್ರಾರು ಲಿಂಗ ಕ್ಷೇತ್ರದಲ್ಲಿ ಲಿಂಗಗಳೇ ಕಣ್ಮರೆ

ಕಾರವಾರ : ಪವಿತ್ರ ಕ್ಷೇತ್ರಗಳ ಪೈಕಿ ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸಹಸ್ರಲಿಂಗ ಕ್ಷೇತ್ರವೂ ಒಂದು.‌ ಭಕ್ತಾಧಿಗಳು ಈ ಕ್ಷೇತ್ರಕ್ಕೆ ಬಂದು ಸಾವಿರಾರು ಲಿಂಗಗಳ ದರ್ಶನ ಪಡೆದು ಪುನೀತರಾಗುತ್ತಿದ್ದರು. ಆದ್ರೆ ಇತ್ತೀಚೆಗೆ ಸಹಸ್ರಲಿಂಗ ಕ್ಷೇತ್ರದಲ್ಲಿ ಲಿಂಗಗಳೇ ಕಣ್ಮರೆಯಾಗುತ್ತಿದ್ದು ಬೆರಳೆಣಿಕೆಯಷ್ಟು ಲಿಂಗಗಳು ಮಾತ್ರ ಕಾಣಿಸುತ್ತಿವೆ.

ಕಾರವಾರ ಜಿಲ್ಲೆಯ ಶಿರಸಿಯ ಭೈರುಂಬೆ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿರುವ ಸಹಸ್ರಲಿಂಗ ಕ್ಷೇತ್ರ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಈ ಕ್ಷೇತ್ರದಲ್ಲಿ ಶಾಲ್ಮಲಾ ನದಿಯ ಎಕರೆಗಟ್ಟಲೆ ಪ್ರದೇಶದಲ್ಲಿ ಕಲ್ಲುಗಳ ಮೇಲೆ ಮತ್ತು ನದಿಯೊಳಗೂ ಸಹ ಸಾವಿರಾರು ಸಂಖ್ಯೆಯಲ್ಲಿ ಶಿವಲಿಂಗಗಳಿದ್ದವು. ಇವು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಹೆಚ್ಚು ಆಕರ್ಷಕವಾಗಿದ್ದವು. ಆದ್ರೆ ಇತ್ತೀಚೆಗೆ ಈ ಕ್ಷೇತ್ರದಲ್ಲಿ ಕಾಣಸಿಗುತ್ತಿದ್ದ ಶಿವಲಿಂಗಗಳು ಕಣ್ಮರೆಯಾಗುತ್ತಿವೆ.

ಮಳೆಗಾಲದಲ್ಲಿ ರಭಸವಾಗಿ ಹರಿಯುವ ಶಾಲ್ಮಲಾ ನದಿ ರಭಸಕ್ಕೆ ಸವೆದು ಇಲ್ಲಿನ ಲಿಂಗಗಳು ಕಣ್ಮರೆಯಾಗಿರೋದು ಒಂದು ಕಾರಣವಾದ್ರೆ, ಇಲ್ಲಿಗೆ ಭೇಟಿ ನೀಡುವ ಕೆಲವು ಕಿಡಿಗೇಡಿ ಪ್ರವಾಸಿಗರು ದಾಂಧಲೆ ಎಬ್ಬಿಸಿ, ಮೋಜಿಗಾಗಿ ಕಲ್ಲುಗಳನ್ನು ಒಡೆದು ಹಾಕಿರುವ ದೂರುಗಳಿವೆ. ಇನ್ನೂ ಸಣ್ಣ ಸಣ್ಣ ಲಿಂಗಗಳನ್ನು ಕೆಲವರು ಕೊಂಡೊಯ್ದಿರುವುದಾಗಿಯೂ ಮಾಹಿತಿಗಳಿವೆ. ಈ ಹಿಂದೆ 2015–16ರ ವೇಳೆಗೆ ಸಮೀಕ್ಷೆ ನಡೆಸಿದ್ದಾಗ ಕೇವಲ ಬೆರಳೆಣಿಕೆಯ ಶಿವಲಿಂಗಗಳು ಉಳಿದುಕೊಂಡಿರುವುದು ದೃಢಪಟ್ಟಿತ್ತು. ಆದ್ರೆ ಪ್ರಸ್ತುತ ಇವುಗಳ ಸಂಖ್ಯೆ ಮತ್ತಷ್ಟು ಕಡಿಮೆಯಾಗಿವೆ. ಹಿಂದಿನ ಸರ್ಕಾರ ಈ ಕ್ಷೇತ್ರಕ್ಕೆ ಅಭಿವೃದ್ದಿಗಾಗಿ ಒಂದಿಷ್ಟು ಹಣ ಮಿಸಲಿಟ್ಟಿದ್ದು, ಸ್ಥಳೀಯರು ಶಿವಲಿಂಗಗಳನ್ನು ರಕ್ಷಣೆ ಮಾಡುವಂತೆ ಸಂಬಂಧಪಟ್ಟವರಿಗೆ ಮನವಿ ಮಾಡಿದ್ರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ರಿಂದ, ಸಹಸ್ರಲಿಂಗಗಳ ರಕ್ಷಣೆಯಾಗಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಅಂದಹಾಗೆ 15ನೇ ಶತಮಾನದಲ್ಲಿ ಸೋದೆ ಅರಸರ ಕಾಲದಲ್ಲಿ ರಾಜ ಅರಸಪ್ಪ ನಾಯಕ ಸಂತಾನಕ್ಕಾಗಿ ಹರಕೆ ಕಟ್ಟಿಕೊಂಡಿದ್ದರು. ಶಿವಕೃಪ ಕಟಾಕ್ಷದಿಂದ ಅವರಿಗೆ ಸಂತಾನ ಪ್ರಾಪ್ತಿಯ ಬಳಿಕ ದೈವಾಜ್ಞೆಯಂತೆ ಈ ಸ್ಥಳದಲ್ಲಿ ಸಹಸ್ರಲಿಂಗಗಳನ್ನು ಕೆತ್ತಿಸಿದ್ದರು ಎಂಬ ಪ್ರತೀತಿಯಿದೆ. ಅಂದಿನಿಂದ ಇಂದಿನವರೆಗೂ ಈ ಸ್ಥಳಕ್ಕೆ ಪ್ರತೀ ವರ್ಷ ಬೇಸಿಗೆಗಾಲದ ಸಮಯದಲ್ಲಿ ಶಿವರಾತ್ರಿ ಹಾಗೂ ಸಂಕ್ರಾಂತಿಯಂದು ಹದಿನೈದರಿಂದ ಇಪ್ಪತ್ತು ಸಾವಿರ ಭಕ್ತಾಧಿಗಳು ಇಲ್ಲಿಗೆ ಭೇಟಿ ನೀಡಿ ಲಿಂಗಗಳಿಗೆ ಪೂಜೆ ಸಲ್ಲಿಸುತ್ತಾರೆ. ಮಳೆಗಾಲದಲ್ಲಿ ಮಾತ್ರ ಈ ಸ್ಥಳ ಸಂಪೂರ್ಣವಾಗಿ ಶಾಲ್ಮಲಾ ನದಿಯಲ್ಲಿ ಮುಳುಗಿರುತ್ತದೆ. ಒಟ್ಟು 16ಕಿ.ಮೀ.ಯಲ್ಲಿ ಸಹಸ್ರಲಿಂಗಗಳು ವ್ಯಾಪಿಸಿವೆ.

ಒಟ್ಟಿನಲ್ಲಿ ಸಹಸ್ರಲಿಂಗ ಕ್ಷೇತ್ರದಲ್ಲಿ ಸಹಸ್ರಾರು ಸಂಖ್ಯೆಯಲ್ಲಿದ್ದ ಶಿವಲಿಂಗಳ ಪೈಕಿ ಸಾಕಷ್ಟು ಲಿಂಗಗಳು ಕಣ್ಮೆರೆಯಾಗಿದ್ದರೆ, ಉಳಿದವುಗಳು ಶಿಥಿಲಗೊಂಡಿವೆ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಇತ್ತ ಗಮನಹರಿಸಿ ಸಹಸ್ರಲಿಂಗ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕಿದೆ.

ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES

Related Articles

TRENDING ARTICLES