ನ್ಯೂಯಾರ್ಕ್: ಮಂಗಳವಾರ ಟೆಕ್ಸಾಸ್‌ನ ಉವಾಲ್ಡೆ ಪ್ರಾಥಮಿಕ ಶಾಲೆಯಲ್ಲಿ ಬಂದೂಕುಧಾರಿಯೊರ್ವ ನಡೆಸಿದ ಗುಂಡಿನ ದಾಳಿಗೆ 18 ಮಂದಿ ಮಕ್ಕಳು ಹಾಗೂ ಒಬ್ಬ ಶಿಕ್ಷಕ ಸಾವನ್ನಪ್ಪಿದ್ದಾರೆ.
ಬಂದೂಕುಧಾರಿಯೋರ್ವನನ್ನ ಪೊಲೀಸರು ಹತ್ಯೆ ಮಾಡಿದ್ದಾರೆ. ಆತ 18 ವರ್ಷ ವಯಸ್ಸಿನವನು, ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾನೆ. ವಾಹನದಲ್ಲಿ ಬಂದ ದಾಳಿಕೋರ ಪ್ರಾಥಮಿಕ ಶಾಲೆಗೆ ನುಗ್ಗಿ ಗುಂಡಿನ ದಾಳಿ ಆರಂಭಿಸಿದ್ದು, ಭೀಕರವಾಗಿ ಹತ್ಯೆ ಮಾಡಿದ್ದಾನೆ ಎಂದು ಟೆಕ್ಸಾಸ್ ಗವರ್ನರ್ ಗ್ರೆಗ್ ಅಬಾಟ್ ತಿಳಿಸಿದ್ದಾರೆ.
‘ಶಾಲೆಗೆ ತೆರಳುವುದಕ್ಕೂ ಮುನ್ನ ದಾಳಿಕೋರ ಆತನ ಅಜ್ಜಿಯ ಮೇಲೂ ದಾಳಿ ನಡೆಸಿದ್ದ ಎನ್ನಲಾಗಿದೆ. ಆದರೆ, ಈ ಎರಡು ದಾಳಿಗಳಿಗೆ ಸಂಬಂಧವಿದೆಯೇ ಎಂಬ ಕುರಿತು ಮಾಹಿತಿ ಇಲ್ಲ’ ಎಂದು ಗವರ್ನರ್ ತಿಳಿಸಿದ್ದಾರೆ.
2012ರಲ್ಲಿ ಕನೆಕ್ಟಿಕಟ್‌ನ ನ್ಯೂಟೌನ್ ಪ್ರಾಥಮಿಕ ಶಾಲೆಯಲ್ಲಿ ನಡೆದಿದ್ದ ದಾಳಿ ನಂತರ ಎಲಿಮೆಂಟ್ರಿ ಶಾಲೆಯೊಂದರಲ್ಲಿ ನಡೆದ ಅತಿ ಭೀಕರ ದಾಳಿ ಇದು ಎಂದು ಇಂಟರ್‌ನ್ಯಾಷನಲ್ ನ್ಯೂಯಾರ್ಕ್ ಟೈಮ್ಸ್ ತನ್ನ ವರದಿಯಲ್ಲಿ ತಿಳಿಸಿದೆ.
ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನೆಲ್ಲ ಸಮೀಪದ ಉವಾಲ್ಡೆ ಸ್ಮಾರಕ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.