ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಮೂವರು ಶಾಸಕರ ಬಳಿಕ ಇದೀಗ ಸಂಸದರೂ, ರಾಜ್ಯ ಬಿಜೆಪಿ ಅಧ್ಯಕ್ಷರೂ ಆದ ನಳಿನ್ ಕುಮಾರ್ ಕಟೀಲ್ ಅವರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ಸೋಂಕು ದೃಢಪಟ್ಟಿರುವ ಬಗ್ಗೆ ನಳಿನ್ ಕುಮಾರ್ ಕಟೀಲ್ ಅವರೇ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿಯನ್ನ ಹಂಚಿಕೊಂಡಿದ್ದಾರೆ. ಯಾವುದೇ ರೋಗ ಲಕ್ಷಣಗಳು ಇಲ್ಲದಿದ್ದರೂ ವೈದ್ಯರ ಸಲಹೆ ಮೇರೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ. ನಿಮೆಲ್ಲರ ಆಶೀರ್ವಾದದಿಂದ ಶೀಘ್ರವೇ ಗುಣಮುಖನಾಗಲಿದ್ದೇನೆ ಅನ್ನೋ ಭರವಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ತನ್ನ ಜೊತೆ ಸಂಪರ್ಕದಲ್ಲಿರುವವರಿಗೆ ಜಾಗರೂಕತೆಯನ್ನೂ ತಿಳಿಸಿದ್ದಾರೆ. ಸಂಸದರಿಗೆ ಕೊರೋನಾ ಪಾಸಿಟಿವ್ ಆಗುವ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ಕನೇ ಜನಪ್ರತಿನಿಧಿ ಕೋವಿಡ್ ಸೋಂಕಿಗೆ ತುತ್ತಾದಂತಾಗಿದೆ. ಈಗಾಗಲೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಮಂಗಳೂರು ಉತ್ತರ ಶಾಸಕ ಡಾ.ವೈ ಭರತ್ ಶೆಟ್ಟಿ ಕೊರೋನಾದಿಂದ ಗುಣಮುಖರಾಗಿದ್ದರೆ, ಸುಳ್ಯ ಶಾಸಕ ಎಸ್.ಅಂಗಾರ ಸೋಂಕಿನಿಂದಾಗಿ ಹೋಂ ಕ್ವಾರೆಂಟೈನ್ ಗೆ ಒಳಗಾಗಿದ್ದಾರೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು