ಕೋಲಾರ : ಕೋಲಾರದ ಕೆಜಿಎಫ್ ನ ಡೆಕ್ಕನ್ ಹೈಡ್ರಾಲಿಕ್ಸ್ ಪ್ರೈವೇಟ್ ಕಂಪೆನಿಗೆ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಶನಿವಾರ ಭೇಟಿ ಕೊಟ್ಟಿದ್ದರು. ರಕ್ಷಣಾ ಇಲಾಖೆಯೂ ಸೇರಿದಂತೆ ಹಲವು ವಿದೇಶಗಳಿಗೆ ಡೆಕ್ಕನ್ ಹೈಡ್ರಾಲಿಕ್ಸ್ ನ ಉತ್ಪನ್ನಗಳು ರಫ್ತಾಗುತ್ತಿರುವ ಬಗ್ಗೆ ಸಚಿವರು ಮಾಹಿತಿಯನ್ನು ಪಡೆದುಕೊಂಡರು. ಸಂಸದ ಎಸ್.ಮುನಿಸ್ವಾಮಿ ಸೇರಿದಂತೆ ಕೈಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.
ಕೋಲಾರದ ಕೆಜಿಎಫ್ ನಲ್ಲಿ 28 ವರ್ಷಗಳ ಹಿಂದೆ ಡೆಕ್ಕನ್ ಹೈಡ್ರಾಲಿಕ್ಸ್ ಕಂಪೆನಿಯು ಶುರುವಾಯ್ತು. ಮುಳಬಾಗಿಲು ಮೂಲದ ರಾಮಕೃಷ್ಣಪ್ಪ ಮತ್ತು ಸಹೋದರರು ಪ್ರಾರಂಭಿಸಿದ ಡೆಕ್ಕನ್ ಹೈಡ್ರಾಲಿಕ್ಸ್ ಪ್ರೈವೇಟ್ ಕಂಪೆನಿಯು ಆರಂಭದಲ್ಲಿ ಬಿಇಎಂಎಲ್ ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಮಾತ್ರ ಉತ್ಪನ್ನಗಳನ್ನು ಪೂರೈಸುತ್ತಿತ್ತು. ಆದ್ರೆ, ಇದೀಗ ಹೈಡ್ರಾಲಿಕ್ಸ್, ಫ್ಯಾಬ್ರಿಕೇಷನ್ಸ್ ಸೇರಿದಂತೆ ಹಲವು ಉತ್ಪನ್ನಗಳನ್ನು ಅಮೇರಿಕ ಒಳಗೊಂಡಂತೆ ಸ್ವೀಡನ್, ಇಟಲಿ, ಫ್ರಾನ್ಸ್ ದೇಶಗಳಿಗೆ ಹೈಡ್ರಾಲಿಕ್ಸ್ ಕಂಪೆನಿಯು ರಫ್ತು ಮಾಡುತ್ತಿದೆ. ಕಂಪೆನಿಯ ಬೆಳವಣಿಗೆಯ ಬಗ್ಗೆ ಸಂಸ್ಥೆಯ ಎಂಡಿ ರಾಮಕೃಷ್ಣಪ್ಪ ಅವ್ರು ಇಂದು ಸಚಿವ ಜಗದೀಶ್ ಶೆಟ್ಟರ್ ಅವರಿಗೆ ವಿವರಿಸಿದ್ರು.
ದೇಶದ ದೈತ್ಯ ಸಂಸ್ಥೆಗಳಿಗೆ ಹಲವಾರು ವರ್ಷಗಳಿಂದಲೂ ಉತ್ಪನ್ನಗಳನ್ನು ಪೂರೈಸುತ್ತಿರುವುದಾಗಿ ಡೆಕ್ಕನ್ ಹೈಡ್ರಾಲಿಕ್ಸ್ ಕಂಪೆನಿಯ ಎಂಡಿ ರಾಮಕೃಷ್ಣಪ್ಪ ಅವ್ರು ಹೇಳಿದ್ರು. ‘ಪವರ್ ಟಿವಿ’ ಜೊತೆಗೆ ಮಾತನಾಡಿದ ಅವ್ರು, ಸರ್ಕಾರದ ಸವಲತ್ತುಗಳನ್ನು ನಿರೀಕ್ಷಿಸದೆ ಗುರಿಯನ್ನು ಸಾಧಿಸುವತ್ತ ಗಮನ ಹರಿಸುತ್ತಿದ್ದೇವೆ. ನಮ್ಮ ನಿರೀಕ್ಷೆಯಂತೆ ಕೈಗಾರಿಕೆಗಳಿಗೆ ಪ್ರೋತ್ಸಾಹ ಕೊಟ್ಟರೆ ಮುಂದಿನ ಮೂರು ವರ್ಷಗಳಲ್ಲಿ ಐದು ನೂರು ಕೋಟಿ ರುಪಾಯಿ ವಹಿವಾಟು ನಡೆಸುವ ಸಂಸ್ಥೆಯನ್ನು ಸ್ಥಾಪಿಸುವುದಕ್ಕೆ ಸಿದ್ದವಿದ್ದೇವೆ ಅಂತ ಅವರು ಆತ್ಮವಿಶ್ವಾಸದಿಂದ ನುಡಿದ್ರು.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.