Monday, February 3, 2025

ಶೋಕಿಗೊಸ್ಕರ ಹೆತ್ತ ಮಗುವನ್ನೇ ಮಾರಿದ ಪಾಪಿ ಪೋಷಕರು.!

ಚಿಕ್ಕಬಳ್ಳಾಪುರ : ಮನೆಯಲ್ಲಿ ಕಿತ್ತು ತಿನ್ನೋ ಬಡತನ, ಒಪ್ಪೊತ್ತಿನ ಊಟಕ್ಕೂ‌ ಪರದಾಡೋ ಸ್ಥಿತಿ ಮನೆಯಲ್ಲಿದೆ. ಆದರೆ ಹೆಣ್ಣು‌ ಮಗು ಅನ್ನೋ ಒಂದೇ ಕಾರಣಕ್ಕೆ ಸದಾ ಮನೆಯಲ್ಲಿ ಜಗಳ ತೆಗೆದು ಕಡೆಗೂ ಹೆಣ್ಣು ಮಗುವನ್ನು ಲಕ್ಷಕ್ಕೆ ಮಾರಾಟ ಮಾಡಿ‌ ತಂದೆ ಮೋಜಿನ ಜೀವನ ನಡೆಸಲು ಮುಂದಾಗಿದ್ದಾನೆ. ವಿಷಯ ತಿಳಿದ ಮಹಿಳಾ ಮಕ್ಕಳ ಕಲ್ಯಾಣ ‌ಇಲಾಖೆ ಮಗುವಿನ ರಕ್ಷಣೆ ಮಾಡಿ ಅಗತ್ಯ ಕ್ರಮಕ್ಕೆ ಮುಂದಾಗಿದೆ…..

ಗುಡಿಸಲು ಮನೆ, ಕಿತ್ತು ತಿನ್ನೋ ಬಡತನ, ಒಪ್ಪೊತ್ತಿನ ಕೂಳಿಗೂ ಪರದಾಡೋ ಸ್ಥಿತಿಯನ್ನ ನಿಭಾಯಿಸಲು ಆಗದೇ ತನ್ನ ನಾಲ್ಕು‌ ತಿಂಗಳ ಹೆಣ್ಣು ಕೂಸನ್ನ ಒಂದು ಲಕ್ಷ ರೂಪಾಯಿಗೆ ಮಾರಾಟ ಮಾಡಿದ ಪೋಷಕರು ಮೋಜಿನ ಜೀವನಕ್ಕೆ ಮುಂದಾಗಿ ಕಡೆಗೂ ಸಿಕ್ಕಿಬಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ತಿನಕಲ್ಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನರಸಿಂಹಮೂರ್ತಿ- ಮಹಾಲಕ್ಷ್ಮೀ ದಂಪತಿಗಳ ನಾಲ್ಕು ತಿಂಗಳ ಹಸುಗೂಸನ್ನ ಶಿಡ್ಲಘಟ್ಟ ತಾಲ್ಲೂಕು ಮಳಮಾಚನಹಳ್ಳಿ ಗ್ರಾಮದ ಮಕ್ಕಳಿಲ್ಲದ ಮುನಿರತ್ನ- ಮಂಜುನಾಥ್ ದಂಪತಿಗಳಿಗೆ ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ, ಜುಟ್ಟಿಗೆ ಮಲ್ಲಿಗೆ ಹೂ ಅನ್ನೋ ಹಾಗೇ,
ಮಗುವನ್ನ ಮಾರಾಟ ಮಾಡಿದ ಹಣದಿಂದ ಮೊಬೈಲ್, ಬೈಕ್ ತಂದು ತಂದೆ ನರಸಿಂಹಮೂರ್ತಿ ಮೋಜಿನ ಜೀವನ ನಡೆಸೋಕೆ ಮುಂದಾಗಿ ಸಿಕ್ಕಿ ಬಿದ್ದಿದ್ದಾರೆ.

ಮಗುವನ್ನ ಮಾರಾಟ ಮಾಡಿದ ತಂದೆ ನರಸಿಂಹಮೂರ್ತಿಯ ತಿರುಭೋಕಿ ಶೋಕಿಯನ್ನ ಗಮನಿಸಿದ ಗ್ರಾಮಸ್ಥರು, ಅನುಮಾನಗೊಂಡು ವಿಚಾರಿಸಿದಾಗ ವಾಸ್ತಾವಾಂಶ ಬೆಳಕಿಗೆ ಬಂದಿದೆ. ಇದನ್ನ ಪವರ್ ಟಿವಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಪವರ್ ಟಿವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಮಾರಾಟವಾದ ಮಗುವನ್ನ ರಕ್ಷಣೆ ಮಾಡಿ, ಹೆತ್ತ ತಾಯಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿ ನರಸಿಂಹಮೂರ್ತಿ ಪರಾರಿಯಾಗಿದ್ದಾನೆ. ಇನ್ನೂ ಮಗುವಿನ ಮಾರಾಟದ ಹಿಂದೆ ಶಿಡ್ಲಘಟ್ಟದಲ್ಲಿ ಹೋಂ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುವ ಅನುಸೂಯ ಅವರ ಕೈವಾಡ ಇದೆ ಎಂದು ಹೇಳಲಾಗ್ತಿದೆ.

ಹೆಣ್ಣು ಮಕ್ಕಳ ಕಲ್ಯಾಣಕ್ಕಾಗಿ ಸರ್ಕಾರಗಳು ಹಲವು ರೀತಿಯ ಯೋಜನೆಗಳು ಜಾರಿಗೆ ತಂದರೂ, ಹೆತ್ತವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗ್ತಿರೋದು ವಿಪರ್ಯಾಸವೇ ಸರಿ. ಇನ್ನೂ ಸರ್ಕಾರದಿಂದ ಬಡವರಿಗೆ ಸೇರಬೇಕಾದ ಯೋಜನೆಗಳು ಸೇರದ ಪರಿಣಾಮ ಹಳ್ಳಿಗಳಲ್ಲಿ ಇನ್ನೂ ಬಡವರು, ನಿರ್ಗತಿಕರು ಅದೇ ಜೀವನ ನಡೆಸುವಂತಾಗಿದೆ.

ಮಲ್ಲಪ್ಪ. ಎಂ.ಶ್ರೀರಾಮ್. ಪವರ್ ಟಿವಿ. ಚಿಕ್ಕಬಳ್ಳಾಪುರ.

RELATED ARTICLES

Related Articles

TRENDING ARTICLES