ಕೋಲಾರ : ಪತಿ ಕುರುಡ ಹಾಗೂ ಕುಡುಕ, ಇಬ್ಬರು ಪುಟ್ಟ ಮಕ್ಕಳು, ಅತ್ತೆಯನ್ನು ಕೂಲಿನಾಲಿ ಮಾಡಿ ಪತ್ನಿ ಪೋಷಣೆ ಮಾಡುತ್ತಿದ್ದಳು. ಇತ್ತ ಪತಿ ಮಹಾಶಯ ಭಿಕ್ಷೆ ಬೇಡಿ ಕುಡಿದು ಗಲಾಟೆ ಮಾಡೋದು, ದೈಹಿಕವಾಗಿ-ಮಾನಸಿಕವಾಗಿ ಹಿಂಸೆ ನೀಡುತ್ತಿದ್ದ. ಹೊಡೆದು ಬಡಿದು ಗಲಾಟೆ ಮಾಡಿರೋ ಕುರುಡ ತನ್ನ ಹೆಂಡತಿಯನ್ನ ಭೀಕರವಾಗಿ ಕೊಲೆ ಮಾಡಿದ್ದಾನೆ.
ಕುಡುಕ ಗಂಡನಿಂದ ಚಿತ್ರ ಹಿಂಸೆಗೆ ಒಳಗಾಗಿ ಮೃತಪಟ್ಟಿರುವ ಮಹಿಳೆ, ಅಲ್ಲೆ ಪಕ್ಕದಲ್ಲೆ ನಿಂತಿರುವ ಏನೂ ಹರಿಯದ ಪುಟ್ಟ ಮಕ್ಕಳು, ಮತ್ತೊಂದೆಡೆ ಕುಡುಕನ ಅವಾಂತರದ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿರುವ ಗ್ರಾಮಸ್ಥರು. ಇದೆಲ್ಲಾ ನಡೆದಿರುವುದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಐನೋರಹೊಸಹಳ್ಳಿಯಲ್ಲಿ. ಗ್ರಾಮದ ರತ್ನಮ್ಮ (28) ಕೊಲೆಯಾದ ದುರ್ದೈವಿ. ಪತಿ ಮಹಾಶಯ ಮಂಜುನಾಥ್ ಕುಡಿದ ಅಮಲಿನಲ್ಲಿ ಹೆಂಡತಿಯ ಎದೆ, ಮೈ-ಕೈ, ಕುತ್ತಿಗೆಯನ್ನು ಬಾಯಿಂದ ಕಚ್ಚಿ ಭೀಕರವಾಗಿ ಕೊಲೆ ಮಾಡಿದ್ದಾನೆ.
ಅಂಧ ಪತಿ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನು ದೈಹಿಕವಾಗಿ ಹಲವು ಕಾಲ ಹಿಂಸೆ ಕೊಟ್ಟು ಬರ್ಬರವಾಗಿ ಕೊಲೆ ಮಾಡಿರುವ ನರ ರಾಕ್ಷಸನ ಕೃತ್ಯವಿದು. ರೈಲು ನಿಲ್ದಾಣದ ಹಾಗೂ ಪಟ್ಟಣದಲ್ಲಿ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದ ಪತಿ ಮಹಾಶಯ ತನ್ನ ಪತ್ನಿಯನ್ನು ಪರಿ ಪರಿಯಾಗಿ ದೈಹಿಕ ಹಿಂಸೆ ಕೊಟ್ಟು ಕೊಲೆ ಮಾಡಿದ್ದಾನೆ. ಮಕ್ಕಳ ಎದುರೆ ಸೋಮವಾರ ದೇಹ ಪೂರ್ತಿ ಗಾಯಗೊಳಿಸಿ ಹಲ್ಲೆ ಮಾಡಿರುವ ಮಂಜುನಾಥ್, ಗಾಯಗೊಂಡು ಮನೆಯಲ್ಲೆ ಬಿದ್ದಿದ್ದ ಹೆಂಡತಿಯನ್ನು ಮನೆಯೊಳಗೆ ಬಿಟ್ಟು, ಮಕ್ಕಳನ್ನ ಮನೆಯಿಂದ ಹೊರ ಹಾಕಿ ಪರಾರಿಯಾಗಿದ್ದಾನೆ. ರತ್ನಮ್ಮ ಸಂಬಂಧಿಕರು ಬಂದು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ.
ಕೊಲೆ ಆರೋಪಿ ಮಂಜುನಾಥ್ ನಿಗೆ 8 ವರ್ಷದ ನಿರೀಕ್ಷಣ್ ಹಾಗೂ 6 ವರ್ಷದ ಕೀರ್ತನಾ ಅನ್ನೋ ಇಬ್ಬರು ಮಕ್ಕಳಿದ್ದಾರೆ. ಕುಡುಕ, ಕುರುಡ ತಂದೆಯ ಅವಾಂತರದಿಂದ ಇಬ್ಬರು ಮಕ್ಕಳು ಕೂಡಾ ಇದೀಗ ಅನಾಥವಾಗಿದ್ದಾರೆ. ಕೊರೋನಾ ಲಾಕ್ಡೌನ್ ಆಗಿ ರೈಲುಗಳಿಲ್ಲದ ಹಿನ್ನಲೆಯಲ್ಲಿ ಕಳೆದ 4 ತಿಂಗಳಿನಿಂದ ಕಾಡಿ ಬೇಡೋದು, ಭಿಕ್ಷೆ ಎತ್ತೋದು ಬಂದ ಹಣದಲ್ಲಿ ಕುಡಿದು ಬಂದು ಹೆಂಡತಿಯನ್ನ ಹೊಡೆದು ಬಡಿದು ತನ್ನ ಪೈಶಾಚಿಕ ಕೃತ್ಯವೆಸಗುತ್ತಿದ್ದ. ನೆರೆ ಹೊರೆಯ ಮನೆಯವ್ರ ಮೇಲೂ ರೌಡಿಸಂ ತೋರಿಸುತ್ತಿದ್ದ ಈತ ರಾತ್ರಿಯಾಗುತ್ತಿದ್ದಂತೆ ತನ್ನ ಬಣ್ಣ ಬದಲಿಸುತ್ತಿದ್ದ. ಕಳೆದ ನಾಲ್ಕು ದಿನಗಳಿಂದ ಪತ್ನಿಯ ಎದೆಯನ್ನು, ಮೈ-ಕೈ ಕಚ್ಚಿ ಗಾಯಗೊಳಿಸಿರುವುದು ಮಾತ್ರವಲ್ಲದೆ ತಲೆಗೆ ಹೊಡೆದು ಗಾಯಗೊಳಿಸಿದ ಪರಿಣಾಮ ಆಕೆ ಶುಕ್ರವಾರ ಮೃತಪಟ್ಟಿದ್ದಾಳೆ. ಸದ್ಯ ಆರೋಪಿ ಪತಿ ಮಂಜುನಾಥ್ ನನ್ನ ಬಂಗಾರಪೇಟೆ ಪೊಲೀಸ್ರು ಬಂಧಿಸಿದ್ದಾರೆ.
ಒಟ್ನಲ್ಲಿ, ತನ್ನಿಬ್ಬರು ಮಕ್ಕಳು, ವಯಸ್ಸಾದ ಅತ್ತೆ, ಕುರುಡು ಗಂಡನನ್ನ ಪೋಷಣೆ ಮಾಡುತ್ತಿದ್ದ ಬಡಪಾಯಿ ಮೇಲೆ ಅನುಮಾನಗೊಂಡ ಪತಿ ಮಹಾಶಯ ಕೊಲೆ ಮಾಡಿ, ಕೃಷ್ಣನ ಜನ್ಮಸ್ಥಳ ಸೇರಿದ್ದಾನೆ. ಈತನ ತಾಯಿಯನ್ನ, ಇಬ್ಬರು ಮಕ್ಕಳನ್ನ ಅನಾಥ ಮಾಡಿದ ಪಾಪಿಗೆ ಕಠಿಣ ಶಿಕ್ಷೆ ಆಗಬೇಕು ಅನ್ನೋದು ಗ್ರಾಮಸ್ಥರ ಒತ್ತಾಯ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.