ಶಿವಮೊಗ್ಗ: ಹಾಸನದಲ್ಲಿ ಬಿಕ್ಷುಕಿಯ ಮೇಲೆ ನಡೆದ ಅತ್ಯಾಚಾರಕ್ಕೆ ಯತ್ನ ಹಾಗೂ ಕೊಲೆ ಘಟನೆಯನ್ನು ಖಂಡಿಸಿ, ಮತ್ತು ಅತ್ಯಾಚಾರಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಅಸಗ್ರಹಿಸಿ ಇಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ಇತ್ತೀಚೆಗೆ ಹಾಸನದಲ್ಲಿ ರಾಜ್ಯವೇ ಬೆಚ್ಚಿಬೀಳುವಂತಹ ಘಟನೆ ನಡೆದಿದೆ. ಅಮಾನುಷ ರೀತಿಯಲ್ಲಿ ಬಿಕ್ಷುಕಿಯ ಮೇಲೆ ಕಾಮಾಂಧನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅದು ವಿಫಲವಾದಾಗ ಕೊಲೆ ಮಾಡಿದ್ದಾನೆ. ಇದು ಮನುಕುಲವೇ ತಲೆತಗ್ಗಿಸಬೇಕಾದ ಸಂಗತಿಯಾಗಿದೆ. ಈ ಕಾಮಪಿಶಾಚಿಯನ್ನು ಶೀಘ್ರವೇ ಬಂಧಿಸಿ ಕಠಿಣಕ್ರಮ ತೆಗೆದುಕೊಳ್ಳಬೇಕು ಎಂದು ಮನವಿದಾರರು ಪ್ರತಿಭಟನೆ ಮೂಲಕ ಆಗ್ರಹಿಸಿದ್ದಾರೆ. ಅಲ್ಲದೇ, ಇಂತಹ ಘಟನೆಗಳು ಮತ್ತೆ ಮತ್ತೆ ನಡೆಯಬಾರದು. ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ರಸ್ತೆ ಬದಿಯ ಮಹಿಳಾ ಬಿಕ್ಷುಕಿಯರನ್ನು ರಕ್ಷಣೆ ಮಾಡಬೇಕೆಂದು ಕಾರ್ಯಕರ್ತರು ಆಗ್ರಹಿಸಿದ್ದಾರೆ.