ಗದಗ : ಉತ್ತರ ಕರ್ನಾಟಕದ ಆರಾಧ್ಯ ದೈವ, ಗದುಗಿನ ನಡೆದಾಡುವ ದೇವರು, ಅಂಧರ ಬಾಳಿನ ಆಶಾಕಿರಣ ಎಂದೇ ಖ್ಯಾತರಾಗಿದ್ದ ಗಾನಯೋಗಿ ಪಂ|ಪುಟ್ಟರಾಜ ಕವಿ ಗವಾಯಿಗಳ 10ನೇ ಪುಣ್ಯಾರಾಧನೆ ನಗರದಲ್ಲಿ ಶುಕ್ರವಾರ ನಡೆಯಿತು.
ಪಂ|ಪುಟ್ಟರಾಜ ಕವಿ ಗವಾಯಿಗಳ ಪುಣ್ಯಾರಾಧನೆ ನಿಮಿತ್ತ ಶುಕ್ರವಾರ ಬೆಳಗ್ಗೆಯಿಂದಲೇ ಇಲ್ಲಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಶ್ರೀಗುರು ಪುಟ್ಟರಾಜರು, ಪಂಚಾಕ್ಷರಿ ಗವಾಯಿಗಳು ಹಾಗೂ ಹಾನಗಲ್ಲ ಕುಮಾರೇಶ್ವರರ ಕರ್ತೃ ಗದ್ದುಗೆಗಳಿಗೆ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಜಲಾಭಿಷೇಕ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳಂತೆ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು. ಪುಣ್ಯಾರಾಧನೆ ನಿಮಿತ್ತ ಕರ್ತೃ ಗದ್ದುಗೆಗಳನ್ನು ವಿಶೇಷವಾಗಿ ಹೂವಿನಿಂದ ಅಲಂಕರಿಸಲಾಗಿತ್ತು.
ಬೆಳಗ್ಗೆಯಿಂದಲೇ ನಗರದ ವೀರೇಶ್ವರ ಪುಣ್ಯಾಶ್ರಮಕ್ಕೆ ಹರಿದು ಬಂದ ಭಕ್ತಸಾಗರ, ಕರ್ತೃ ಗದ್ದೆಗೆ ದರ್ಶನಾಶೀರ್ವಾದ ಪಡೆದರು. ಇಲ್ಲಿನ ಭೂಮರಡ್ಡಿ ವೃತ್ತದಲ್ಲಿರುವ ಪಂ|ಪುಟ್ಟರಾಜ ಕವಿ ಗವಾಯಿಗಳ ಪುತ್ಥಳಿಗೆ ಬೃಹತ್ ಹಾರ ಹಾಕಿ, ಭಕ್ತರು ನಮನ ಸಲ್ಲಿಸಿದರು. ವೀರೇಶ್ವರ ಪುಣ್ಯಾಶ್ರಮದ ಹಾಲಿ ಹಾಗೂ ಹಳೆ ವಿದ್ಯಾರ್ಥಿಗಳು ಆಶ್ರಮದಲ್ಲಿ ಸಂಗೀತ ಗಾಯನ, ವಾದ್ಯಗಳನ್ನು ನುಡಿಸಿ, ತ್ರಿವಿಧ ದಾಸೋಹಿಗಳಿಗೆ ಭಕ್ತಿ ಸಮರ್ಪಿಸಿದರು.
ಇದೇ ವೇಳೆ ಶ್ರೀ ಗುರು ಪುಟ್ಟರಾಜರ ಪುಣ್ಯಾರಾಧನೆ ನಿಮಿತ್ತ ಇಲ್ಲಿನ ಹಳೇ ಜಿಲ್ಲಾಧಿಕಾರಿಗಳ ಕಚೇರಿ, ಭೂಮರೆಡ್ಡಿ ಸರ್ಕಲ್, ಕೆ.ಸಿ.ರಾಣಿ ರಸ್ತೆ, ಜಿಲ್ಲಾ ಕ್ರೀಡಾಂಗಣದ ಬಳಿ ಸಾರ್ವಜನಿಕರಿಗೆ ಪ್ರಸಾದ ವಿತರಿಸುವ ಮೂಲಕ ಭಕ್ತರು ಧನ್ಯತೆ ಮೆರೆದರು.
ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಪೂಜ್ಯರ ಭಾವಚಿತ್ರಗಳ ಮೆರವಣಿಗೆ ಕೈಬಿಡುವುದರೊಂದಿಗೆ ಈ ಬಾರಿ ಪುಣ್ಯಾರಾಧನೆಯನ್ನು ಸಾಂಕೇತಿಕವಾಗಿ ಆಚರಿಸಲಾಯಿತು.
ಗಾನಯೋಗಿ ಪಂಡಿತ ಪುಟ್ಟರಾಜರ ಪುಣ್ಯಸ್ಮರಣೆ
TRENDING ARTICLES