ಶಿವಮೊಗ್ಗ : ಜಿಲ್ಲಾ ಉಸ್ತುವಾರಿ ಸಚಿವ ಈಶ್ವರಪ್ಪರನ್ನು ಟೀಕೆ ಮಾಡಲು ಹೋಗಿ ಸಿ.ಎಂ. ಯಡಿಯೂರಪ್ಪರನ್ನು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್ ಸುಂದರೇಶ್ ಹೊಗಳಿದ್ದಾರೆ. ಯಡಿಯೂರಪ್ಪರಿಂದಲೇ, ಇಂದು ಬಿಜೆಪಿ ಅಧಿಕಾರಕ್ಕಿದ್ದು, ಅವರನ್ನು ಕೈ ಬಿಟ್ಟು ನೋಡಲಿ, ಬಿಜೆಪಿ 40 ಸೀಟಲ್ಲಾ, 30 ಸೀಟುಗಳನ್ನು ಕೂಡ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ. ಸಿ.ಎಂ. ಯಡಿಯೂರಪ್ಪ ಪರ ಬ್ಯಾಟಿಂಗ್ ಮಾಡಿದ ಸುಂದರೇಶ್. ಕಾಂಗ್ರೆಸ್ ನಲ್ಲಿ ನಾಯಕತ್ವ ಇಲ್ಲ, ಕಾಂಗ್ರೆಸ್ ಮುಳುಗುತ್ತಿರುವ ಹಡಗು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿಕೆ ನೀಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ, ಯಡಿಯೂರಪ್ಪ ಕೆಜೆಪಿ ಬಿಟ್ಟು ಬಿಜೆಪಿಗೆ ಬಾರದೇ ಹೋಗಿದ್ದರೆ ಬಿಜೆಪಿ ಅಧಿಕಾರಕ್ಕೆ ಬರುತ್ತಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿಗೆ ಈಗಲೂ ತಾಕತ್ತಿದ್ದರೆ, ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿ ನೋಡಲೀ ಎಂದಿದ್ದಾರೆ. ಬಿಜೆಪಿಯಲ್ಲಿಯೂ ಕೂಡ ಯಡಿಯೂರಪ್ಪರನ್ನು ಹೊರತುಪಡಿಸಿ, ನಾಯಕತ್ವದ ಕೊರತೆ ಇದೆ. ಸಚಿವ ಈಶ್ವರಪ್ಪ ಕೇವಲ ಬೇಡವಾದುದ್ದನ್ನೇ ಮಾಡುತ್ತಾ ಬರುತ್ತಿದ್ದಾರೆ. ಈಶ್ವರಪ್ಪ ಕೇವಲ ಬಾಲಿಶ ಹೇಳಿಕೆಗಳನ್ನು ನೀಡುತ್ತಾ ಎಲ್ಲಾ ವಿಚಾರಗಳಲ್ಲಿಯೂ ರಾಜಕೀಯ ಮಾಡಿಕೊಂಡು ಓಡಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ. 70 ವರ್ಷದಿಂದ ಆಡಳಿತ ನಡೆಸಿಕೊಂಡು ಬಂದಿರುವ ಕಾಂಗ್ರೆಸ್ ಗೆ ನಾಯಕತ್ವ ಇಲ್ಲ ಎಂದು ಹೇಳುವ ಈಶ್ವರಪ್ಪ ಕೇವಲ ಸುಳ್ಳು ಹೇಳಿಕೊಂಡೇ ಓಡಾಡುತ್ತಿದ್ದಾರೆ. ಇರೋ ಬರೋ ಸುಳ್ಳುಗಳನ್ನು ಹೇಳಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಜನರು ಮುಂದಿನ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ.
ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿದ ಕಾಂಗ್ರೆಸ್ ಪಕ್ಷದ ಬಗ್ಗೆ ಹಲವು ಬಿಜೆಪಿ ನಾಯಕರು ಟೀಕೆ ಮಾಡುತ್ತಿದ್ದಾರೆ. ಮೊದಲು ಅವರು ಬಂದಂತಹ ದಾರಿಯ ಬಗ್ಗೆ ಯೋಚಿಸಿ ಟೀಕೆ ಮಾಡಬೇಕು. ಒಂದಲ್ಲ ಒಂದು ದಿನ ಬಿಜೆಪಿಯು ಮುಳುಗುವ ಹಡಗಾಗಬಹುದು ಎಂಬುದನ್ನು ಮನಗಂಡು ಟೀಕೆಗಳನ್ನು ಮಾಡಬೇಕು. ಕೊರೋನಾದಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಇದನ್ನು ಸರಿ ಮಾಡದ ಪ್ರಧಾನಿ ನರೇಂದ್ರ ಮೋದಿಯವರು ತಮ್ಮೊಬ್ಬರನ್ನೇ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಸುಂದರೇಶ್ ಟೀಕಿಸಿದರು. ಕೊರೋನಾ ಸಂದರ್ಭದಲ್ಲಿ ಸಂಕಷ್ಟಕ್ಕೊಳಗಾದವರಿಗೆ ಪ್ರಕಟಿಸಿದ್ದ ಪರಿಹಾರದ ಪ್ಯಾಕೇಜ್ ನಲ್ಲಿ ಶೇ.20ರಷ್ಟು ಮಾತ್ರ ಜನರಿಗೆ ತಲುಪಿದೆ. ಈ ಪ್ಯಾಕೇಜ್ ಜನರಿಗೆ ಮೂಗಿಗೆ ತುಪ್ಪ ಸವರುವ ತಂತ್ರವಾಗಿದೆ ಎಂದು ಆಪಾದಿಸಿದ್ದಾರೆ.