ಮಂಗಳೂರು : ಅಕ್ರಮ ಆಸ್ತಿಗಳಿಕೆ ಸಂಬಂಧ ಲೋಕಾಯುಕ್ತ ಇಲಾಖೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಕರಾವಳಿ ಕಾವಲು ಪಡೆ ವೃತ್ತ ನಿರೀಕ್ಷಕರೊಬ್ಬರಿಗೆ ಕಠಿಣ ಶಿಕ್ಷೆಯನ್ನ ಮಂಗಳೂರಿನ ಮೂರನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಘೋಷಿಸಿದೆ. ಪ್ರಸ್ತುತ ಕರಾವಳಿ ಕಾವಲು ಪಡೆ ವೃತ್ತ ನಿರೀಕ್ಷಕರಾಗಿರುವ ಗಂಗಿ ರೆಡ್ಡಿ ಅವರಿಗೆ ನಾಲ್ಕು ವರ್ಷ ಜೈಲು ಹಾಗೂ 5 ಲಕ್ಷ ರೂ. ದಂಡವನ್ನ ವಿಧಿಸಲಾಗಿದೆ. ಈ ಹಿಂದೆ 2009 ರಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿದ್ದ ಸಮಯದಲ್ಲಿ ಲೋಕಾಯುಕ್ತ DYSP ಸದಾನಂದ ವರ್ಣೇಕರ್ ಮತ್ತು ತಂಡ ದಾಳಿ ನಡೆಸಿ ತನಿಖೆಯನ್ನ ಆರಂಭಿಸಿತ್ತು. ತನಿಖೆ ಸಂದರ್ಭ ಗಂಗಿ ರೆಡ್ಡಿ ಅವರಲ್ಲಿ ಸುಮಾರು 19 ಲಕ್ಷ ರೂ. ಅಷ್ಟು ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ತನಿಖೆಯನ್ನ ಪೂರ್ಣಗೊಳಿಸಿದ್ದ ತನಿಖಾ ತಂಡವು ಗಂಗಿ ರೆಡ್ಡಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿತ್ತು. ಪ್ರಕರಣ ಸಂಬಂಧ 22 ಸಾಕ್ಷಿಗಳನ್ನು ತನಿಖಾ ತಂಡವು ವಿಚಾರಣೆಗೆ ಒಳಪಡಿಸಲಾಗಿತ್ತು.
ಇದೀಗ ಅಪರಾಧಿ ಗಂಗಿ ರೆಡ್ಡಿ ಮೇಲಿನ ಆದಾಯಕ್ಕೂ ಮೀರಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಾಬೀತಾಗಿದ್ದು, ನ್ಯಾಯಾಲಯವು ಅಪರಾಧಿ ಗಂಗಿ ರೆಡ್ಡಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು