Monday, February 3, 2025

ಕೋಲಾರದಲ್ಲಿ ಪುಡಿ ರೌಡಿಗಳಿಂದ ಹಲ್ಲೆಗೊಳಗಾದ ಯುವಕ ಸಾವು..!

ಕೋಲಾರ : ಚಿನ್ನದ ಗಣಿ ಇದ್ದಾಗ ಚಿನ್ನದ ಹೊಳಪನ್ನೆ ಆ ಊರು ಹೊಂದಿತ್ತು. ಆದ್ರೆ, ಗಣಿಗಳು ಮುಚ್ಚಿದ ನಂತ್ರ ಆ ಊರಿನಲ್ಲಿ ರೌಡಿಗಳ, ಪುಡಿ ರೌಡಿಗಳ ಅಟ್ಟಹಾಸವೇ ಹೆಚ್ಚು. ಕಳೆದ ಕೆಲ ವರ್ಷಗಳಿಂದ ನಗರದಲ್ಲಿ ನಡೆದ ಅದೆಷ್ಟೋ ಕೊಲೆಗಳಿಂದಾಗಿ ಆ ಊರಿಗೆ ಕೆಟ್ಟ ಹೆಸರು ಬಂದಿದೆ. ಬುಧವಾರ ರಾತ್ರಿ ನಡೆದ ಎರಡು ಗುಂಪುಗಳ ನಡುವಿನ ಗ್ಯಾಂಗ್ ವಾರ್ ಗೆ ಹೆಣ ಬಿದ್ದಿದೆ. ಕೋಲಾರದ ಕೆಜಿಎಫ್ ನಲ್ಲಿ ಏರಿಯಾಗಳ ನಡುವಿನ ಗ್ಯಾಂಗ್ ವಾರ್ ಟ್ರಂಡ್, ಮಚ್ಚು, ಲಾಂಗ್ ಗಳು ಆಗಾಗ ಸದ್ದು ಮಾಡುತ್ತಲೇ ಇರುತ್ತವೆ.
ಯುವಕನನ್ನ ಕಳೆದುಕೊಂಡ ಸಂಬಂಧಿಕರ ಮುಗಿಲು ಮುಟ್ಟಿದ ಆಕ್ರಂದನ. ಕೊಲೆ ಮಾಡಿದವರ ವಿರುದ್ದ ಆಕ್ರೋಶ ಹೊರ ಹಾಕುತ್ತಿರುವ ಸ್ನೇಹಿತರು. ಮತ್ತೊಂದೆಡೆ ರಕ್ತದ ಮಡುವಿನಲ್ಲಿ ಮಲಗಿ ಸಾವಿಗೂ ಮುನ್ನ ಕೊಲೆ ಮಾಡಿದವರ ಹೆಸರು ಹೇಳುತ್ತಿರುವ ಯುವಕ ಸ್ಟಾಲಿನ್. ಇಂಥಾದೊಂದು ದೃಶ್ಯ ಕೆಜಿಎಫ್ ಸಿನಿಮಾದಲ್ಲಿ ಬರುವ ರೀಲ್ ಸನ್ನಿವೇಶ ಅಲ್ಲ. ಬದಲಾಗಿ ಕೋಲಾರ ಜಿಲ್ಲೆಯ ಕೆಜಿಎಫ್ ನಗರದಲ್ಲಿ ನಡೆದ ರಿಯಲ್ ಸನ್ನಿವೇಶ. ನಗರದ ಚಾಮರಾಜಪೇಟೆ ವೃತ್ತದಲ್ಲಿ ಬುಧವಾರ ರಾತ್ರಿ ಎರಡು ಏರಿಯಾದ ಯುವಕರ ನಡುವೆ ನಡೆದ ಗ್ಯಾಂಗ್ ವಾರ್ ನಂತರದ ಸನ್ನಿವೇಷವಿದು.
ಕೆಜಿಎಫ್ ನ ದೊರೆ ಅನ್ನೋ ಯುವಕನ ಬರ್ತಡೇ ಪಾರ್ಟಿ ವಿಚಾರದಲ್ಲಿ ಎಸ್ಟಿ ಬ್ಲಾಕ್ ಮತ್ತು ಸೂಸೈಪಾಳ್ಯಂನ ಸ್ಟಾಲಿನ್ ಹಾಗೂ ಆತನ ಸ್ನೇಹಿತರ ನಡುವೆ ಏರಿಯಾ ವಿಚಾರದಲ್ಲಿ ಗಲಾಟೆ ನಡೆದಿದೆ. ಈ ನಡುವೆ ಬುಧವಾರ ರಾತ್ರಿ ಬರ್ತ್ಡೇ ಪಾರ್ಟಿಯಲ್ಲಿ ಜಗಳ ಮಾಡಿಕೊಂಡಿದ್ದ ಸೂಸೈಪಾಳ್ಯಂನ ಸ್ಟಾಲಿನ್ ಹಾಗೂ ಎಸ್ಟಿ ಬ್ಲಾಕ್ನ ಸುರೇನ್ ಅವ್ರು ಕೆಜಿಎಫ್ ನಗರದ ಕೆ ಎಸ್.ಆರ್.ಟಿ.ಸಿ ಡಿಪೋ ಬಳಿ ಎದುರಾಗಿದ್ದಾರೆ. ಈ ವೇಳೆ ಲಾಂಗು ಹಾಗು ಮಚ್ಚುಗಳೊಂದಿಗೆ ಸುರೇನ್ ಹಾಗೂ ಆತನ ಸ್ನೇಹಿತರು ಸ್ಟಾಲಿನ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ. ಈ ವೇಳೆ ಸ್ಟಾಲಿನ್ ಜೊತೆಗಿದ್ದ ಸ್ನೇಹಿತ ಬರ್ನಾಡ್ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಆದ್ರೆ, ಸ್ಟಾಲಿನ್ ಹಲ್ಲೆಗೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ. ನಂತ್ರ ಆತನನ್ನು ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಸ್ಟಾಲಿನ್ ಮೃತಪಟ್ಟಿದ್ದಾನೆ.
ಮೃತ ಸ್ಟಾಲಿನ್ ಗೆ 2017ರ ಆಂಥೋನಿ ಅನ್ನೋ ಯುವಕನ ಕೊಲೆ ಪ್ರಕರಣದ ಹಿನ್ನಲೆ ಕೂಡಾ ಇದೆ. ಸ್ಟಾಲಿನ್ ತಂದೆ ಜಾನ್ಸನ್ ಕೂಡಾ ರೌಡಿಶೀಟರ್ ಆಗಿದ್ದ. ಅಪರಾಧ ಹಿನ್ನಲೆ ಹೊಂದಿದ್ದ ಕುಟುಂಬ ಅನ್ನೋ ಕಾರಣಕ್ಕೆ ಸ್ಟಾಲಿನ್ ಗ್ಯಾಂಗ್ ಕೂಡಾ ಕಡಿಮೆ ಏನು ಇರಲಿಲ್ಲ. ಆದ್ರೆ, ಸ್ಟಾಲಿನ್ ಬರ್ತಡೇ ಪಾರ್ಟಿಯಲ್ಲಿ ಆಗಿದ್ದ ಸಣ್ಣ ಗಲಾಟೆ, ದ್ವೇಷವನ್ನ ನಿರ್ಲಕ್ಷ್ಯ ಮಾಡಿದ್ದೆ ತಪ್ಪಾಯ್ತು. ಅದನ್ನೆ ಸೀರಿಯಸ್ಸಾಗಿ ತಗೊಂಡಿದ್ದ ಸುರೇನ್ ಮತ್ತು ಆತನ ಗ್ಯಾಂಗ್ ಸ್ಟಾಲಿನ್ ಗೆ ಮುಹೂರ್ತ ಇಟ್ಟಿದ್ರು. ಅದರಂತೆ ಸ್ಟಾಲಿನ್ ಅವ್ರನ್ನ ರಾತ್ರಿಯಲ್ಲಿ ಲಾಂಗ್, ಮಚ್ಚುಗಳಿಂದ ಕೊಲೆ ಮಾಡಿದ್ದಾರೆ. ಇದೀಗ ಕೆಜಿಎಫ್ ನ ಅಂಡರ್ಸನ್ಪೇಟೆ ಪೊಲೀಸ್ರು ನಾಲ್ವರು ಆರೋಪಿಗಳನ್ನ ಬಂಧಿಸಿದ್ದಾರೆ. ಆದ್ರೆ, ಈಗಾಗಲೆ ನೊಂದಿರುವ ಹಾಗೂ ಅಪರಾಧ ಹಿನ್ನಲೆ ಹೊಂದಿರುವ ಸ್ಟಾಲಿನ್ ಕುಟುಂಬಸ್ಥರು ದ್ವೇಷ ಸಾಧಿಸಿದರೆ ಮುಂದೆ ಏನಾಗುತ್ತೋ ಗೊತ್ತಿಲ್ಲ.
ಒಟ್ನಲ್ಲಿ, ಕೆಜಿಎಫ್ ಚಿನ್ನದ ಗಣಿಗಳು ಮುಚ್ಚಿ 17 ವರ್ಷಗಳಾಗಿದೆ. ಆದ್ರೆ, ಗಣಿಗಳು ಮುಚ್ಚಿದ ನಂತ್ರ ಇಲ್ಲಿನ ರೌಡಿಗಳ, ಪುಡಿರೌಡಿಗಳ ಅಟ್ಟಹಾಸ ಮುಂದುವರೆದಿದೆ. ಇನ್ನಾದ್ರೂ ಪೊಲೀಸ್ರು ಇಂತಹ ರಕ್ತಸಿಕ್ತ ಚಟುವಟಿಕೆಗಳಿಗೆ ಕಡಿವಾಣ ಹಾಕ್ತಾರಾ ಅನ್ನೋದನ್ನ ಕಾದು ನೋಡಬೇಕಾಗಿದೆ.

ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.

RELATED ARTICLES

Related Articles

TRENDING ARTICLES