ಮೈಸೂರು: ಗ್ರಾಮಗಳ ಅಭಿವೃದ್ದಿಗಾಗಿ ಸರ್ಕಾರ ಕೋಟಿ ಕೋಟಿ ಹಣ ವೆಚ್ಚ ಮಾಡುತ್ತಿದೆ. ಹೀಗಿದ್ದೂ ಸಮಸ್ಯೆಗಳು ಬೆಟ್ಟದಷ್ಟು ಬೆಳೆಯುತ್ತಿದೆ. ಅಭಿವೃದ್ದಿಗೆ ಒತ್ತು ನೀಡಿದಷ್ಟೂ ಒಂದೊಂದು ಗ್ರಾಮದಲ್ಲಿ ಒಂದೊಂದು ರೀತಿಯ ಸಮಸ್ಯೆಗಳು ಉದ್ಭವವಾಗುತ್ತಲೇ ಇದೆ. ನಂಜನಗೂಡಿನ ಅಂಬಳೆ ಗ್ರಾಮದ ನಿವಾಸಿಗಳ ಸಮಸ್ಯೆ ವಿಭಿನ್ನ. ಅಸಹ್ಯ ಹುಟ್ಟಿಸುವಂತದ್ದು. ಆಧುನಿಕ ಪ್ರಪಂಚದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇಂತಹ ಹೀನ ವ್ಯವಸ್ಥೆ ಇದ್ಯಾ ಅನ್ನಿಸೋದು ಗ್ಯಾರೆಂಟಿ. ಗ್ರಾಮಸ್ಥರ ಶೋಚನೀಯ ಪರಿಸ್ಥಿತಿಗೆ ಇದೊಂದು ಸ್ಪಷ್ಟ ಉದಾಹರಣೆಯಾಗಿದೆ.
ಕಳೆದ 15 ವರ್ಷಗಳಿಂದ ಈ ಗ್ರಾಮದ ಜನತೆಯ ದುರಂತ ಸಮಸ್ಯೆ ಇದು. ಈ ಗ್ರಾಮದಲ್ಲಿ ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲ. ಕೊಳಚೆ ನೀರು ಬಂದರೆ ಸರಾಗವಾಗಿ ಹರಿದು ಹೋಗಲು ಸ್ಥಳವಿಲ್ಲ. ಈ ಸಮಸ್ಯೆಗೆ ಇವರು ಕಂಡುಕೊಂಡ ಉಪಾಯ ಅಂದ್ರೆ ಮನೆ ಮುಂದೆ ಗುಂಡಿ ತೆರೆದು ಕೊಳಚೆ ನೀರನ್ನ ಸ್ಟಾಕ್ ಮಾಡುತ್ತಾರೆ. ಗುಂಡಿ ಭರ್ತಿಯಾದ ನಂತರ ಬಕೆಟ್ನಲ್ಲಿ ತುಂಬಿ ಮತ್ತೊಂದು ಕಡೆಗೆ ಎಸೆಯುತ್ತಾರೆ. ಸುಮಾರು 50 ಕುಟುಂಬಗಳಿಗೆ ಇದೇ ಸಮಸ್ಯೆ ಕಾಡುತ್ತಿದೆ. ಈ ಸಮಸ್ಯೆಗೆ ಪರಿಹಾರ ಒದಗಿಸುವಂತೆ ಸ್ಥಳೀಯ ಶಾಸಕರಿಗೆ ಮನವಿ ಮಾಡಿದ್ದಾರೆ. ತಹಶೀಲ್ದಾರ್ ಹಾಗೂ ಪಿಡಿಓಗಳ ಗಮನಕ್ಕೆ ತಂದಿದ್ದಾರೆ. ಇದರಿಂದ ಯಾವುದೇ ಪ್ರಯೋಜನ ಆಗಿಲ್ಲ. ಈಗಾಗಲೇ ಕೊರೋನಾ ಸಾವಿನ ಭೀತಿ ಸೃಷ್ಟಿಸಿದೆ. ಇದರಿಂದ ಆರೋಗ್ಯ ಕೆಟ್ಟಾಗ ಆಸ್ಪತ್ರೆಗಳಿಗೆ ಹೋದರೆ ಚಿಕಿತ್ಸೆ ಸಿಗುತ್ತಿಲ್ಲ. ನಮ್ಮ ಸಮಸ್ಯೆ ಪರಿಹಾರ ಸಿಗೋದು ಹೇಗೆ? ಹೀಗಾಗಿ ಈ ಗ್ರಾಮವನ್ನೇ ಬಿಟ್ಟು ಹೋಗ್ತೀವಿ ಅಂತ ನಿರ್ಧಾರ ಮಾಡಿದ್ದಾರೆ ಗ್ರಾಮಸ್ಥರು.
ಸ್ವಚ್ಛಭಾರತ್ ಮಿಷನ್ ಅಡಿಯಲ್ಲಿ ಸರ್ಕಾರ ಸ್ವಚ್ಛತೆಗಾಗಿ ಸಾಕಷ್ಟು ಅನುದಾನ ನೀಡಿದೆ. ಅನುದಾನಗಳು ಗ್ರಾಮೀಣ ಪ್ರದೇಶಗಳಿಗೆ ತಲುಪುತ್ತಿಲ್ಲ ಎಂಬ ಆರೋಪಗಳಿಗೆ ಈ ಜ್ವಲಂತ ಸಮಸ್ಯೆಯೇ ಸಾಕ್ಷಿಯಾಗಿದೆ.