Sunday, February 2, 2025

ಕೊರೋನಾ ಎಫೆಕ್ಟ್; ಸಕ್ಕರೆ ನಾಡಲ್ಲಿ ಮದ್ಯ ಮಾರಾಟ ಕುಸಿತ!

ಮಂಡ್ಯ : ಸರ್ಕಾರದ ಬೊಕ್ಕಸ ತುಂಬುವ ಪ್ರಮುಖ ಆದಾಯದ ಮೂಲ ಮದ್ಯ. ಆದ್ರೆ, ಕೊರೋನಾ ಕರಿಛಾಯೆ ಮದ್ಯ ಮಾರಾಟದ ಮೇಲೂ ಪರಿಣಾಮ ಬೀರಿದೆ. ಸಕ್ಕರೆ ನಾಡು ಮಂಡ್ಯ ಜಿಲ್ಲೆಯಲ್ಲಿ ಶೇ.50ರಷ್ಟು ಮದ್ಯ ಮಾರಾಟ ಕುಸಿದಿದೆ.
ಅರೇ.. ಲಾಕ್ ಡೌನ್ ನಿಂದ ಬಂದಾಗಿದ್ದ ಮದ್ಯ ಮಾರಾಟ ಮಳಿಗೆಗಳು ಓಪನ್ ಮಾಡಲು ಸರ್ಕಾರ ಅನುಮತಿ ನೀಡುತ್ತಿದ್ದಂತೆ ಮದ್ಯಪ್ರಿಯರು ಕಿಲೋ ಮೀಟರ್ ದೂರದಷ್ಟು ಕ್ಯೂ ನಿಂತು ಎಣ್ಣೆ ಖರೀದಿಸಿದ್ದ ದೃಶ್ಯ ಇನ್ನೂ ಕಣ್ಮುಂದೆ ಇವೆ.
ಅಂತದ್ರಲ್ಲಿ ಇದೇನಪ್ಪ ಮದ್ಯ ಮಾರಾಟದಲ್ಲಿ ಕುಸಿತ ಎಂದು ಹೇಳ್ತಿದ್ದಾರಲ್ಲಾ ಅಂತಿರಾ? ಹೌದು, ಕೊರೋನಾ ಕರಿಛಾಯೆ ಮದ್ಯ ಮಾರಾಟದ ಮೇಲೂ ಪರಿಣಾಮ ಬೀರಿದೆ.

ಮಂಡ್ಯ ಜಿಲ್ಲೆಯಲ್ಲಿ ಶೇ.50ರಷ್ಟು ಮದ್ಯ ಮಾರಾಟ ಇಳಿಕೆ!:

ಮಂಡ್ಯ ಜಿಲ್ಲೆಯಲ್ಲಿ ಸುಮಾರು ಶೇ.50ರಷ್ಟು ಮದ್ಯ ಮಾರಾಟ ಇಳಿಕೆಯಾಗಿದೆ. 2019ರ ಏಪ್ರಿಲ್‌ನಿಂದ ಜುಲೈ ತಿಂಗಳವರೆಗೆ ಮಂಡ್ಯ ಜಿಲ್ಲೆಯಲ್ಲಿ ಬಿಯರ್ 2,22,456 ಬಾಕ್ಸ್ ಮಾರಾಟವಾಗಿತ್ತು. ಆದರೆ 2020ರಲ್ಲಿ 1,00,534 ಬಾಕ್ಸ್ ಮಾತ್ರ ಮಾರಾಟವಾಗಿದೆ. ಅಂದರೆ ಮಾರಾಟದಲ್ಲಿ ಶೇ. 54.81 ರಷ್ಟು ವ್ಯತ್ಯಾಸ ಕಂಡು ಬಂದಿದೆ. ಮದ್ಯ ಮಾರಾಟವನ್ನು ನೋಡುವುದಾದರೆ 2019ರ ಏಪ್ರಿಲ್‌ನಿಂದ ಜುಲೈ ತಿಂಗಳಲ್ಲಿ 6,34,069 ಬಾಕ್ಸ್ ಮಾರಾಟವಾಗಿದೆ. ಈಗ 4,80,681 ಬಾಕ್ಸ್ ಮಾತ್ರ ಮಾರಾಟ ಮಾಡಲಾಗಿದೆ. ಶೇ. 24.19ರಷ್ಟು ಮಾರಾಟ ಕುಸಿದಿದೆ.
ಸುಮಾರು ಒಂದೂವರೆ ತಿಂಗಳು ಮದ್ಯದಂಗಡಿ ಮುಚ್ಚಿದ್ದವು. ಅಲ್ಲದೆ ಬಾರ್ & ರೆಸ್ಟೋರೆಂಟ್ ಗಳಲ್ಲಿ ಕೂತು ಕುಡಿಯಲು ಅವಕಾಶ ಸಿಕ್ಕಿಲ್ಲ. ಇದರೊಂದಿಗೆ ಬೆಲೆಯಲ್ಲೂ ಏರಿಕೆಯಿಂದಾಗಿ ಮದ್ಯ ಮಾರಾಟ ಕುಸಿತವಾಗಿದೆ. ಹೊರ ರಾಜ್ಯಗಳಿಂದ ಕೆಲಸ ಅರಸಿ ಜಿಲ್ಲೆಗೆ ವಲಸೆಬಂದಿದ್ದ ಸಾವಿರಾರು ಮಂದಿ ತಮ್ಮೂರುಗಳಿಗೆ ವಾಪಸ್ಸಾಗಿದ್ದಾರೆ. ಇದರೊಂದಿಗೆ ಜನರ ಆದಾಯ ಕಡಿಮೆಯಾಗಿರೊದು ಮಾರಾಟ ಇಳಿಕೆಗೆ ಕಾರಣವಾಗಿದೆ ಅಂತಿದ್ದಾರೆ ವೈನ್ ಶಾಪ್ ಮಾಲೀಕರ ಸಂಘದ ಖಜಾಂಚಿ ಪುಟ್ಟೇಗೌಡ.
ಕೊರೋನಾ ಮಹಾಮಾರಿಯಿಂದಾಗಿ ಅದೆಷ್ಟೋ ಉದ್ಯಮಗಳು ನೆಲಕಚ್ಚಿದ್ದು, ಮದ್ಯಮಾರಾಟದ ಮೇಲೂ ಪರಿಣಾಮ ಬೀರಿದೆ. ಇನ್ನೊಂದೆಡೆ ಕುಡುಕರ ಗಲಾಟೆಗಳು ಕಡಿಮೆಯಾಗಿದ್ದು, ಅದೆಷ್ಟೋ ಕುಟುಂಬಗಳು ನೆಮ್ಮದಿಯಿಂದ ಇವೆ ಅಂದರೆ ತಪ್ಪಾಗಲಾರದು.
….
ಡಿ.ಶಶಿಕುಮಾರ್, ಮಂಡ್ಯ.

RELATED ARTICLES

Related Articles

TRENDING ARTICLES