ವಿಜಯಪುರ : ಆಲಮಟ್ಟಿ ಆಣೆಕಟ್ಟಿನ ಸುತ್ತಮುತ್ತಲ ಗ್ರಾಮಗಳಿಗೆ ಈಗ ಪ್ರವಾಹದ ಭೀತಿ ಶುರುವಾಗಿದೆ. ಮಹಾರಾಷ್ಟ್ರದ ಸಹ್ಯಾದ್ರಿ ಘಟ್ಟ ಪ್ರದೇಶಗಳಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೃಷ್ಣಾನದಿ ಉಕ್ಕಿ ಹರಿಯೋದಕ್ಕೆ ಶುರುವಾಗಿದೆ. ಹೀಗಾಗಿ 2.40 ಲಕ್ಷಕ್ಕು ಅಧಿಕ ಕ್ಯುಸೆಕ್ ನಷ್ಟು ನೀರು ಒಳ ಹರಿವು ಇರುವ ಪರಿಣಾಮ ವಿಜಯಪುರ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಡ್ಯಾಮ್ ನಿಂದ ಅಧಿಕಾರಿಗಳು 2.50 ಲಕ್ಷ ಕ್ಯೂಸೆಕ್ ನಷ್ಟು ನೀರನ್ನ ಹೊರಗೆ ಹರಿಬಿಡ್ತಿದ್ದಾರೆ. ಇದರ ಪರಿಣಾಮ ಆಲಮಟ್ಟಿ ಡ್ಯಾಂನ ಸುತ್ತಲಿರುವ ಜಮೀನುಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಅರಳದಿನ್ನಿ, ಯಲಗೂರು, ಯಲ್ಲಮ್ಮನ ಬೂದಿಹಾಳ, ಕಾಶಿನಕುಂಟೆ, ಮಸೂತಿ ಗ್ರಾಮಗಳ ನೂರು ಏಕರೆಗೂ ಅಧಿಕ ಕೃಷಿ ಭೂಮಿಯಲ್ಲಿ ನೀರು ದಾಂಗುಡಿ ಇಟ್ಟಿದೆ. 50ಕ್ಕು ಅಧಿಕ ಎಕರೆ ಭೂಮಿಯಲ್ಲಿ ಬೆಳೆದ ಕಬ್ಬು, 10 ಎಕರೆಗೂ ಅಧಿಕ ಸೂರ್ಯಕಾಂತಿ, ಗೋವಿನಜೋಳ, ಗೋಧಿ ಸೇರಿದಂತೆ ವಿವಿಧ ಬೆಳೆಗಳು ಜಲಾವೃತ್ತಗೊಂಡಿವೆ…
ಇನ್ನು ಹೆಚ್ಚಿನ ಪ್ರಮಾಣದಲ್ಲಿ ಕೃಷ್ಣಾ ನದಿಗೆ ನೀರು ಹರಿದು ಬರ್ತಿರೋದ್ರಿಂದ ಆಲಮಟ್ಟಿ ಡ್ಯಾಂನ ಎಡ ಹಾಗೂ ಬಲ ಭಾಗದಲ್ಲಿರುವ ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಗ್ರಾಮಗಳಲ್ಲಿ ಪ್ರವಾಹ ಭೀತಿ ಶುರುವಾಗಿದೆ. ಇನ್ನೂ ಹೊಳೆ ಮಸೂತಿ ಗ್ರಾಮದ ಕೆಲ ರೈತರಿಗೆ ಹೋದ ವರ್ಷದ ಬೆಳೆ ಹಾನಿ ಪರಿಹಾರವನ್ನೇ ನೀಡಿಲ್ಲ ಎಂಬ ಆರೋಪ ಕೂಡಾ ಕೇಳಿ ಬಂದಿದೆ. ಈಗಾಗಲೇ 2.50 ಲಕ್ಷ ಕ್ಯೂಸೆಕ್ ನಷ್ಟು ನೀರು ಕೃಷ್ಣಾ ನದಿಗೆ ಹರಿದು ಬರುತ್ತಿದ್ದು, ಇದು 3 ಲಕ್ಷ ದಾಟಿದಲ್ಲಿ ಅರಳದಿನ್ನಿ, ಯಲಗೂರು, ಮಸೂತಿ ಗ್ರಾಮಗಳಲ್ಲಿ ಪ್ರವಾಹ ಉಂಟಾಗುವ ಆತಂಕವಿದೆ. ಇನ್ನು ಮೊನ್ನೆಯಷ್ಟೆ ಮಹಾರಾಷ್ಟ್ರದಲ್ಲಿ ಮಳೆಯಾದಾಗ ಈ ಗ್ರಾಮಗಳ ಕೃಷಿ ಭೂಮಿ ಜಲಾವೃತ್ತಗೊಂಡಿತ್ತು. ಈಗ ಮತ್ತೆ ನೀರು ನುಗ್ಗಿರುವ ಕಾರಣ ಬೆಳೆ ಹಾನಿಯಾಗುವ ಭಯ ಇಲ್ಲಿನ ರೈತರನ್ನ ಕಾಡುತ್ತಿದೆ..
ಇನ್ನೂ ಈ ಭಾಗದ ನದಿ ಪಾತ್ರದ ಬಹುತೇಕ ರೈತರ ಜಮೀನುಗಳು ಮತ್ತೆ ಜಲಾವೃತಗೊಂಡಿದ್ದು ನಾಳೆ ಸಿಎಂ ಯಡಿಯೂರಪ್ಪ ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನಲೆ ಕಳೆದ ವರ್ಷದ ಪರಿಹಾರ ಕಾಮಗಾರಿ ಕುರಿತು ಪರಿಶೀಲನೆ ನಡೆಸುವ ಮೂಲಕ ಈ ವರ್ಷದ ಪರಿಹಾರದ ಹಣ ಬಿಡುಗಡೆ ಮಾಡಬೇಕು ಎಂಬುದೇ ರೈತರ ಒತ್ತಾಯವಾಗಿದೆ…