ಕೋಲಾರ : ಏಷ್ಯಾದಲ್ಲಿಯೇ ಹೆಚ್ಚು ಪ್ರಮಾಣದಲ್ಲಿ ಟೊಮೇಟೊ ವಹಿವಾಟು ನಡೆಸುವ ಮಾರುಕಟ್ಟೆ ಕೋಲಾರದಲ್ಲಿದೆ. ದೇಶ-ವಿದೇಶಗಳಿಗೆ ಟಮೆಟೋ ರವಾನಿಸುವ ಈ ಮಾರುಕಟ್ಟೆಗೆ ಸ್ಥಳಾವಕಾಶದ ಕೊರತೆಯಿದೆ. ಅಗತ್ಯವಿರುವಷ್ಟು ಜಮೀನನ್ನು ಮಂಜೂರು ಮಾಡಲು ಸರ್ಕಾರವೇನೋ ಸಿದ್ದತೆಯನ್ನು ಮಾಡಿಕೊಂಡಿದೆ. ಆದ್ರೆ, ಈ ಮಧ್ಯೆ ಇಲ್ಲಿನ ಜನಪ್ರತಿನಿಧಿಗಳು ಜಾಗದ ವಿಚಾರದಲ್ಲಿ ಖಚಿತ ನಿಲುವಿಗೆ ಬಂದಿಲ್ಲ. ಇದೇ ಕಾರಣಕ್ಕಾಗಿ ಜಮೀನು ಮಂಜೂರು ಡೋಲಾಯಮಾನವಾಗಿದೆ.
ಕೋಲಾರ ಜಿಲ್ಲೆಯ ಸುಮಾರು 40 ಸಾವಿರ ಎಕರೆಯಲ್ಲಿ ಟೊಮೇಟೊ ಬೆಳೀತಾರೆ. ಈ ಜಿಲ್ಲೆಯಲ್ಲಿ ಉತ್ತಮ ಗುಣಮಟ್ಟದ ಟೊಮೇಟೊ ಬೆಳಿಯೋ ಹೆಸರಿದೆ. ಇಲ್ಲಿನ ಟೊಮೇಟೊ ಭಾರತದ ವಿವಿಧ ರಾಜ್ಯಗಳು ಹಾಗೂ ನೆರೆಯ ರಾಷ್ಟ್ರಗಳಿಗೆ ಸರಬರಾಜಾಗುತ್ತೆ. ವರ್ಷಪೂರ್ತಿ ಆವಕವಾಗುವ ಟೊಮೇಟೊಗೆ ಕೋಲಾರದಲ್ಲಿ ಸೂಕ್ತ ಮಾರುಕಟ್ಟೆಯಿಲ್ಲ. ಮಾರ್ಕೆಟ್ ಜಾಗದ ಕೊರತೆಯಿಂದಾಗಿ ಇಲ್ಲಿನ ವಹಿವಾಟು ಅವ್ಯವಸ್ಥೆಯಿಂದ ಕೂಡಿದೆ.
ಕೋಲಾರದ ಈಗಿನ ಮಾರುಕಟ್ಟೆಯನ್ನು 1983 ರಲ್ಲಿ ಅಭಿವೃದ್ದಿಪಡಿಸಲಾಗಿತ್ತು. ಸುಮಾರು 20 ಎಕರೆಯಷ್ಟು ಜಮೀನಿನಲ್ಲಿರುವ ಈ ಮಾರ್ಕೆಟ್ನಲ್ಲಿ ಟೊಮೇಟೊ ಸೇರಿದಂತೆ ಎಲ್ಲ ತರಕಾರಿಗಳ ವಹಿವಾಟು ನಡೆಯಬೇಕಾಗಿದೆ. ವರ್ಷದ ಏಳೆಂಟು ತಿಂಗಳು ನಡೆಯುವ ಟೊಮೇಟೊ ಸೀಸನ್ನಲ್ಲಿ ಈ ಮಾರ್ಕೆಟ್ನಲ್ಲಿ ನಿತ್ಯವೂ ನೂರಾರು ಲಾರಿಗಳ ಓಡಾಟವಿರುತ್ತದೆ. ಕಿಷ್ಕಿಂಧೆಯಂತಿರುವ ಈ ಮಾರುಕಟ್ಟೆಯಿಂದಾಗಿ ಬೆಳೆಗಾರರಿಗೆ, ವ್ಯಾಪಾರಸ್ಥರಿಗೆ ಮತ್ತು ರಫ್ತುದಾರರಿಗೆ ವಿಪರೀತ ಕಿರಿಕಿರಿಯಾಗುತ್ತಿದೆ. ಅನೇಕ ಸಲ ಈ ಸಮಸ್ಯೆಯಿಂದಾಗಿ ವರ್ತಕರಿಗೆ ನಷ್ಟವಾಗಿರುವ ನಿದರ್ಶನಗಳೂ ಇವೆ.
ಕೋಲಾರ ಎಪಿಎಂಸಿ ಮಾರ್ಕೆಟ್ನಲ್ಲಿರುವ ಜಾಗದ ತೊಂದ್ರೆಯನ್ನು ಹಲವು ವರ್ಷಗಳ ಹಿಂದೆಯೇ ಸರ್ಕಾರದ ಗಮನಕ್ಕೆ ತರಲಾಗಿದೆ. ಇತ್ತೀಚೆಗೆ ಈ ಬಗ್ಗೆ ಗಮನಹರಿಸಿರುವ ಜಿಲ್ಲಾಡಳಿತವು ಟೊಮೇಟೊ ಮಾರುಕಟ್ಟೆಗಾಗಿ ಸಮೀಪದ ಮಂಗಸಂದ್ರ ಗ್ರಾಮದ ಬಳಿ 30 ಎಕರೆ ಜಮೀನನ್ನು ಮಂಜೂರು ಮಾಡಲು ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಆದ್ರೆ, ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಚೆಲುವನಹಳ್ಳಿ ಗ್ರಾಮದಲ್ಲಿನ ಜಮೀನು ಕೊಟ್ಟರೆ ವಹಿವಾಟಿಗೆ ಅನುಕೂಲವಾಗುತ್ತೆ ಅನ್ನೋ ಪಟ್ಟು ಎಪಿಎಂಸಿ ಮಂಡಳಿಯವ್ರದ್ದಾಗಿದೆ. ಆಡಳಿತ ಮಂಡಳಿಯವ್ರು ಕೇಳಿರುವ ಜಮೀನು ಅರಣ್ಯ ಭೂಮಿ ಮತ್ತು ಕೆರೆ ಅಂಗಳಗಳಾದ್ರಿಂದ ಮಂಜೂರು ಸಾಧ್ಯವಿಲ್ಲ ಅನ್ನೋದು ಗೊತ್ತಿದೆ. ಆದ್ರೂ ಈ ಮಧ್ಯೆ ಜನಪ್ರತಿನಿಧಿಗಳು ಕೊಟ್ಟಿರುವ ಭರವಸೆಯನ್ನು ನಂಬಿಕೊಳ್ಳಲಾಗಿದೆ.
ಒಟ್ನಲ್ಲಿ, ನಲವತ್ತು ವರ್ಷಗಳ ನಂತ್ರ ಕೋಲಾರದ ಕೃಷಿ ಉತ್ಪನ್ನ ಮಾರುಕಟ್ಟೆಗೆ ಕಾಯಕಲ್ಪ ಕೊಡೋದಿಕ್ಕೆ ಸರ್ಕಾರ ಮನಸ್ಸು ಮಾಡಿದೆ. ಈ ಸಂದರ್ಭದಲ್ಲಿ ಜಮೀನು ಬಗೆಗಿನ ವಿವಾದವನ್ನು ದೊಡ್ಡದಾಗದಂತೆ ಎಪಿಎಂಸಿ ಆಡಳಿತ ಮಂಡಳಿಯು ಜಾಣ್ಮೆಯಿಂದ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾಗಿದೆ.
ಆರ್.ಶ್ರೀನಿವಾಸಮೂರ್ತಿ, ಪವರ್ ಟಿವಿ, ಕೋಲಾರ.