ಮಂಗಳೂರು : ಸಿರಿಯಾ ದೇಶದ ಕಾರ್ಗೋ ಹಡಗು ಮಂಗಳೂರಿನ ಉಳ್ಳಾಲ ಕಡಲ ತೀರದಲ್ಲಿ ಮುಳುಗಡೆಯಾಗಿದೆ. ತೀರದಿಂದ 1.5 ನಾಟಿಕಲ್ ಮೈಲು ದೂರದಲ್ಲಿ ಹಡಗು ಮುಳುಗುತ್ತಿದ್ದು ತೈಲ ಸೋರಿಕೆ ಭೀತಿ ವ್ಯಕ್ತವಾಗಿದೆ.
ಹಡಗನ್ನು ಮೇಲೆತ್ತಲು ಸಾಧ್ಯವೇ ಎಂದು ಪರಿಶೀಲಿಸಲು ಮುಂಬೈನ ತಂತ್ರಜ್ಞರು ಮಂಗಳೂರಿಗೆ ಆಗಮಿಸಿದ್ದಾರೆ. ನೌಕೆಯ ಉಸ್ತುವಾರಿ ನೋಡಿಕೊಳ್ಳುವ ಏಜೆನ್ಸಿಯೊಂದು ಹಡಗಿನಲ್ಲಿರುವ 220 ಟನ್ ತೈಲ ಸೋರಿಕೆಯಾಗದಂತೆ ತಡೆಯಲು ಪ್ರಯತ್ನ ಆರಂಭಿಸಿದೆ.
ಮಲೇಶಿಯಾದಿಂದ ಲೆಬನಾನ್ ಗೆ 8 ಸಾವಿರ ಟನ್ ಸ್ಟೀಲ್ ಕಾಯಿಲ್ ಗಳನ್ನು ಹೊತ್ತುಕೊಂಡು ಲೆಬನಾನ್ ದೇಶದ ಬೀರತ್ ಬಂದರಿಗೆ ತೆರಳುತ್ತಿತ್ತು. ಅರಬ್ಬೀ ಸಮುದ್ರ ದಾಟಿಕೊಂಡು ತೆರಳುತ್ತಿದ್ದಾಗ ಹಡಗಿನಲ್ಲಿ ರಂಧ್ರ ಉಂಟಾಗಿದ್ದು ಹಡಗು ಮುಳುಗಡೆ ಭೀತಿ ಉಂಟಾಗಿತ್ತು. ಕೂಡಲೇ ಭಾರತೀಯ ಕೋಸ್ಟ್ ಗಾರ್ಡ್ ಪಡೆ ಅದರಲ್ಲಿದ್ದ 15 ಮಂದಿ ಸಿಬಂದಿಯನ್ನು ರಕ್ಷಿಸಿದ್ದಾರೆ. ಜಿಲ್ಲಾಡಳಿತದ ವತಿಯಿಂದ ತೈಲ ಸೋರಿಕೆ ಆಗದಂತೆ ನಿಗಾ ವಹಿಸಲಾಗಿದೆ.