ಚಾಮರಾಜನಗರ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರು ಜನರ ಮುಂದೆ ಪರಸ್ಪರ ತಬ್ಬಿಕೊಳ್ಳುವಂತೆ ರಾಹುಲ್ ಗಾಂಧಿ ಹೇಳುತ್ತಾರೆ. ಆದರೆ, ಅವರಿಬ್ಬರ ಶರೀರ ಒಂದಾಗಿರಬಹುದು. ಆದರೆ ಹಿಂಭಾಗದಲ್ಲಿ ಇಬ್ಬರ ಕೈಯಲ್ಲೂ ಚಾಕು ಇದ್ದು, ಚುಚ್ಚೋಕೆ ಕಾಯ್ತಾ ಇದಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾರ್ಯಕರ್ತರು ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗಿದರೇ ಡಿ.ಕೆ ಶಿವಕುಮಾರ್ ಸಿಡಿಮಿಡಿಯಾಗುತ್ತಾರೆ. ಡಿ.ಕೆ ಶಿವಕುಮಾರ್ ಸಿಎಂ ಅಂದ್ರೆ ಖುಷಿಯಾಗುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಎರಡು ಬಣಗಳಿವೆ ಎಂದು ಕುಟುಕಿದ್ದಾರೆ.
ಸಿದ್ದರಾಮಯ್ಯ ಹಿಂದೂ ವಿರೋಧಿ
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹಿಂದೂ ಸಮಾಜಕ್ಕೆ ವಿರುದ್ಧವಾಗಿದ್ದಾರೆ. ಒಕ್ಕಲಿಗರು, ದಲಿತರು ಸೇರಿದಂತೆ ಎಲ್ಲರನ್ನು ದೂರ ಇಡುತ್ತಿರುವ ಅವರು, ಹೇಗಾದರೂ ಮಾಡಿ ಮುಸ್ಲಿಮರನ್ನು ತೃಪ್ತಿ ಪಡಿಸಬೇಕು ಎಂದು ಮೂರ್ನಾಲ್ಕು ವರ್ಷಗಳಿಂದ ಪ್ರಯತ್ನ ಪಡುತ್ತಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಸಿದ್ದರಾಮಯ್ಯ ಮೇಲೆ ಹರಿಹಾಯ್ದಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಗೆ ಅಂತಿಮ ಮೊಳೆ ಹೊಡೆಯುತ್ತೇವೆ : ಸಚಿವ ಆರ್. ಅಶೋಕ್
ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು?
ಸಿದ್ದರಾಮಯ್ಯ ತಾವೊಬ್ಬರು ಮಾತ್ರ ಹಿಂದುಳಿದ ಹಾಗೂ ದಲಿತರ ನಾಯಕ ಎಂದು ಕೊಂಡಿದ್ದಾರೆ. ದಲಿತ ನಾಯಕ ಡಾ.ಜಿ ಪರಮೇಶ್ವರ್ ಅವರನ್ನು ಸೋಲಿಸಿದ್ದು ಯಾರು? ಮುನಿಯಪ್ಪ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಶಿಷ್ಯರೇ ಅಲ್ಲವೇ? ಅವರ ಸೋಲಿಗೆ ಯಾರು ಕಾರಣ ಎಂದು ಹೇಳಲಿ. ದಲಿತ ನಾಯಕರು, ಹಿಂದುಳಿದ ನಾಯಕರು ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾದು ಕುಳಿತಿದ್ದಾರೆ ಎಂದು ಛೇಡಿಸಿದ್ದಾರೆ.
ಸಿದ್ದರಾಮಯ್ಯಗೆ ಸೋಲುವ ಭಯ ಕಾಡ್ತಿದೆ
ಸಿದ್ದರಾಮಯ್ಯ ಅವರಿಗೆ ಚುನಾವಣಾ ಸ್ಪರ್ಧಿಸಲು ಇನ್ನೂ ಕ್ಷೇತ್ರ ಸಿಕ್ಕಿಲ್ಲ. ಚಾಮುಂಡೇಶ್ವರಿ, ವರುಣಾದಲ್ಲಿ ನಿಲ್ಲದೆ ಕೋಲಾರ ಕ್ಷೇತ್ರ ಎಂದು ಹೇಳುತ್ತಿದ್ದಾರೆ. ಎಲೆಕ್ಷನ್ ನಲ್ಲಿ ಸೋಲುವ ಭಯ ಕಾಡುತ್ತಿದೆ. ಹಾಗಾಗಿ ಸುಳ್ಳು ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಬಿಜೆಪಿಯವರಿಂತ ಕಾಂಗ್ರೆಸ್‌ನವರೇ ಅವರನ್ನು ಸೋಲಿಸಲು ಷಡ್ಯಂತ್ರ ರೂಪಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ರಾಜ್ಯದ 224 ಕ್ಷೇತ್ರಗಳಲ್ಲಿ ಎಲ್ಲಿ ಸ್ಪರ್ಧಿಸಿದರೂ ಸಿದ್ದರಾಮಯ್ಯ ಗೆಲುವು ಸಾಧಿಸುತ್ತಾರೆ ಎಂದು ಕಾಂಗ್ರೆಸ್ ನವರು ಹೇಳುತ್ತಿದ್ದಾರೆ. ನಿಲ್ಲಲಿ ಬಿಡಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಯಾಕೆ ಸ್ಪರ್ಧೆ ಮಾಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ.