ಚಂದಿರನ ಅಂಗಳದಲ್ಲಿ ಭಾರತ ಇತಿಹಾಸ ನಿರ್ಮಿಸಲು ಕ್ಷಣಗಣನೆ ಆರಂಭವಾಗಿದ್ದು, ಈ ಐತಿಹಾಸಕ ಕ್ಷಣ ನೋಡಲು ಇಡೀ ದೇಶವೇ ಕಾತುರದಿಂದ ಕಾಯುತ್ತಿದೆ.
ಇನ್ನೇನು ಕೆಲವೇ ಗಂಟೆಗಳಲ್ಲಿ ಅಮೆರಿಕ , ರಷ್ಯಾ, ಚೀನಾ ದೇಶಗಳ ಸಾಧನೆಯನ್ನು ಭಾರತ ಸರಿಗಟ್ಟಲಿದೆ. ಇಂದು ತಡರಾತ್ರಿ 1 ಗಂಟೆ ಬಳಿಕ ಚಂದ್ರನಲ್ಲಿ ಲ್ಯಾಂಡರ್ ಇಳಿಸುವ ಪ್ರಕ್ರಿಯೆ ಆರಂಭವಾಗಲಿದ್ದು ಬೆಳಗ್ಗೆ. 5.30 ರಿಂದ 6.30 ರ ನಡುವೆ ವಿಕ್ರಮ್ ಲ್ಯಾಂಡರ್ ಒಳಗಿಂದ ರೋವರ್ ಪ್ರಗ್ಯಾನ್ ಹೊರ ಬಂದು ಚಂದ್ರನ ಅಂಗಳದ ಮೇಲೆ ಇಳಿಯಲಿದೆ. ಕ್ಯಾಮರಾ ಮತ್ತು ಸೆನ್ಸಾರ್ ನೀಡುವ ಮಾಹಿತಿ ಆಧಾರದ ಮೇಲೆ ಕಾರ್ಯ ನಡೆಸಲಾಗುತ್ತದೆ. ಚಂದ್ರನ ಸ್ಪರ್ಶಿಸುವ ಕೊನೆಯ 15 ನಿಮಿಷ ನಮಗೆ ಸತ್ವಪರೀಕ್ಷೆ ಎಂದು ಇಸ್ರೋ ಅಧ್ಯಕ್ಷ ಕೆ. ಶಿವನ್ ಹೇಳಿದ್ದಾರೆ.
ಈ ಐತಿಹಾಸಿಕ ಕ್ಷಣಗಳನ್ನು ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಪೀಣ್ಯ ಬಳಿಯಿರುವ ಇಸ್ರೋ ಸಂಶೋಧನಾ ಕೇಂದ್ರಕ್ಕೆ ಆಗಮಿಸಲಿದ್ಧಾರೆ. ಸುಮಾರು 60 ವಿದ್ಯಾರ್ಥಿಗಳೊಂದಿಗೆ ಐತಿಹಾಸಿಕ ದೃಶ್ಯವನ್ನು ಮೋದಿ ವೀಕ್ಷಣೆ ಮಾಡಲಿದ್ದು ಕರ್ನಾಟಕದ ಇಬ್ಬರು ವಿದ್ಯಾರ್ಥಿಗಳು ಚಂದ್ರಯಾನ 2 ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಅವಕಾಶ ಪಡೆದಿದ್ದಾರೆ. ಇಸ್ರೋ ಸಂಸ್ಥೆ ಆಗಸ್ಟ್ 10ರಿಂದ 25ರ ನಡುವೆ ಹಲವು ಸುತ್ತುಗಳ ಆನ್‌ಲೈನ್ ಕ್ವಿಜ್ ನಡೆಸಿತ್ತು. 20 ಪ್ರಶ್ನೆಗಳಿಗೆ 10 ನಿಮಿಷದ ಅವಧಿಯಲ್ಲಿ ಸರಿ ಉತ್ತರ ನೀಡುವ 60 ಅದೃಷ್ಟಶಾಲಿ ವಿದ್ಯಾರ್ಥಿಗಳಿಗೆ ಲ್ಯಾಂಡರ್ ಮತ್ತು ರೋವರ್ ಚಂದ್ರನ ಮೇಲೆ ಸ್ಪರ್ಷಿಸುವ ಕ್ಷಣವನ್ನು ನೇರ ಪ್ರಸಾರದಲ್ಲಿ ವೀಕ್ಷಿಸುವ ಅವಕಾಶ ಕಲ್ಪಿಸುವುದಾಗಿ ಇಸ್ರೋ ಹೇಳಿತ್ತು. ಅದರಂತೆ ರಾಯಚೂರು ಜಿಲ್ಲೆಯ ಸಿಂಧನೂರಿನ ಡಾಫೋಡಿಲ್ಸ್ ಕಾನ್ಸೆಪ್ಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಜಿ.ವೈಷ್ಣವಿ ನಾಗರಾಜ ಆಯ್ಕೆಯಾಗಿದ್ದಾರೆ.