Saturday, November 23, 2024

ಬದುಕಿನ ಪಯಣ ಮುಗಿಸಿದ ಅರುಣ್​​​​ ಜೇಟ್ಲಿಯವರ ಜೀವನದ ಹಾದಿ..

ನವದೆಹಲಿ: ದೇಶ ಕಂಡ ಅದ್ಭುತ ರಾಜಕಾರಣಿ, ಬಿಜೆಪಿ ಧುರೀಣ, ಮಾಜಿ ಕೇಂದ್ರ ಸಚಿವ ಅರುಣ್​ ಜೇಟ್ಲಿ(66) ಇನ್ನಿಲ್ಲ.. ತನ್ನ ರಾಜಕೀಯ ಜೀವನದಲ್ಲಿ ದಕ್ಷತೆ ಮತ್ತು ಪ್ರಾಮಣಿಕತೆಯನ್ನು ಮೆರೆದಿದ್ದ ಅವರು ಇಂದು ಕೊನೆಯುಸಿರೆಳೆದ್ರು. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ದೆಹಲಿಯ ಏಮ್ಸ್​​ ಆಸ್ಪತ್ರೆಯಲ್ಲಿ ನಿಧನರಾದ್ರು.

1952ರ ಡಿಸೆಂಬರ್ 28ರಂದು ಕಿಶನ್ ಹಾಗೂ ರತನ್ ಪ್ರಭಾ ದಂಪತಿಗಳ ಪುತ್ರನಾಗಿ ಜನಿಸಿದ ಅರುಣ್​​ ಜೇಟ್ಲಿಯವ್ರು, 1969-1970ರಲ್ಲಿ ದೆಹಲಿಯ ಸೇಂಟ್ ಕ್ಸೇವಿಯರ್ಸ್​​ನಲ್ಲಿ ತನ್ನ ಆರಂಭಿಕ ವಿದ್ಯಾಭ್ಯಾಸವನ್ನೂ, 1973ರಲ್ಲಿ ದೆಹಲಿಯ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್​ನಲ್ಲಿ ವಾಣಿಜ್ಯ ಪದವಿಯನ್ನು, 1977ರಲ್ಲಿ ದೆಹಲಿ ವಿವಿ ಫ್ಯಾಕಲ್ಟಿ ಆಫ್ ಲಾದಲ್ಲಿ ಕಾನೂನು ಪದವಿ ಪಡೆದ್ರು. ಎಳವೆಯಲ್ಲಿಯೇ ಉತ್ತಮವಾದ ನಾಯಕತ್ವ ಗುಣವನ್ನು ಹೊಂದಿದ್ದ ಅವರು ಎಬಿವಿಪಿಯಲ್ಲಿ ಗುರುತಿಸಿಕೊಂಡಿದ್ರು. ಅಷ್ಟೇ ಅಲ್ಲದೇ, 1974ರಲ್ಲಿ ದೆಹಲಿ ವಿವಿಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ್ರು. ಆ ವೇಳೆಯಲ್ಲಿ ಅವರನ್ನು ಗುರುತಿಸಿದ್ದ ಜಯಪ್ರಕಾಶ್​ ನಾರಯಣ್​​ರವರು, ತಮ್ಮ ನ್ಯಾಶನಲ್​ ಕಮಿಟಿ ಫಾರ್​​ ಸ್ಟೂಡೆಂಟ್​​ ಆರ್ಗನೈಸೇಶನ್​​ಗೆ ಸಂಘಟಕರಾಗಿ ನೇಮಿಸಿದ್ರು. 1975ರ ವೇಳೆ ಜಾರಿಗೆ ಬಂದ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟಕ್ಕಿಳಿದ ಜೇಟ್ಲಿಯವರನ್ನು ಅಂದಿನ ಸರ್ಕಾರ ಬಂಧಿಸಿ ಜೈಲಿಗೆ ತಳ್ಳಿತು.

ಸೆರೆಮನೆ ವಾಸದ ಬಳಿಕ ಜನಸಂಘವನ್ನು ಸೇರಿದ ಅರುಣ್​​ ಜೇಟ್ಲಿಯವರು 1980ರಲ್ಲಿ ಬಿಜೆಪಿಯ ಯುವ ಘಟಕದ ಅಧ್ಯಕ್ಷರಾಗಿ ನೇಮಕಗೊಂಡ್ರು. 1977ರಿಂದ ಸುಪ್ರೀಂ ಕೋರ್ಟ್​​​ ಸೇರಿದಂತೆ ವಿವಿಧ ಕೋರ್ಟ್​ಗಳಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದ ಅವರನ್ನು 1989ರಲ್ಲಿ ವಿ.ಪಿ.ಸಿಂಗ್​​ ಅವರ ಸರ್ಕಾರದಲ್ಲಿ ಅಡಿಷನಲ್​ ಸಾಲಿಸಿಟರ್​​​ ಜನರಲ್​​ ಆಗಿ ನೇಮಿಸಲಾಗುತ್ತೆ. ಈ ಅವಧಿಯಲ್ಲಿ ಅವರು ಬೋಪರ್ಸ್ ಹಗರಣದ ಮೇಲೆ ಬೆಳಕು ಚೆಲ್ಲಿದ್ರು.

1999ರ ಚುನಾವಣೆಯಲ್ಲಿ ಬಿಜೆಪಿ ವಕ್ತಾರರಾಗಿ ನೇಮಕಗೊಂಡ ಅರುಣ್​​ ಜೇಟ್ಲಿಯವರು ಅಟಲ್​ ವಿಹಾರಿ ವಾಜಪೇಯಿಯವರ ಸರ್ಕಾರದಲ್ಲಿ ಮಾಹಿತಿ ಹಾಗೂ ಪ್ರಸಾರ ಖಾತೆ ರಾಜ್ಯ ಮಂತ್ರಿಯಾಗಿ, 2000ರ ನವೆಂಬರ್​ನಲ್ಲಿ ಕಾನೂನು ಕ್ಯಾಬಿನೆಟ್ ಮಂತ್ರಿಯಾಗಿ, ಹಾಗೂ 2003ರಲ್ಲಿ ವಾಣಿಜ್ಯ ಮತ್ತು ಕೈಗಾರಿಕ ಸಚಿವರಾಗಿ ಸೇವೆ ಸಲ್ಲಿಸಿದ್ರು. 2002ರಲ್ಲಿ ಗುಜರಾತ್​​ ಚುನಾವಣೆಯ ಸಂದರ್ಭ ಉಸ್ತವಾರಿ ಹೊಣೆಯನ್ನು ವಹಿಸಿಕೊಂಡಿದ್ದ ಜೇಟ್ಲಿಯವರು, ಗುಜರಾತ್​​​ನಲ್ಲಿ ಮೋದಿ ಗೆಲುವಿಗೆ ನೆರವಾದ್ರು. ಗುಜರಾತ್​​​ನಿಂದಲೇ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾದ ಅವರು 2007ರಲ್ಲೂ ಮೋದಿ ಮುಖ್ಯಮಂತ್ರಿಯಾಗುವಲ್ಲಿ ಪಾತ್ರವಹಿಸಿದ್ರು. 2003ರಲ್ಲಿ ಮಧ್ಯಪ್ರದೇಶದ ಚುನಾವಣೆಯ ಉಸ್ತುವಾರಿ ವಹಿಸಿಕೊಂಡಿದ್ದ ಜೇಟ್ಲಿಯವರು ಅಲ್ಲೂ ಬಿಜೆಪಿ ವಿಜಯಿಯಾಗುವಂತೆ ಮಾಡಿದ್ರು. ವಿಶೇಷವೆಂದರೇ, 2004ರಲ್ಲಿ ಕರ್ನಾಟಕದ ಬಿಜೆಪಿ ಉಸ್ತುವಾರಿ ವಹಿಸಿದ್ದ ಅರುಣ್​​ ಜೇಟ್ಲಿ, ರಾಜ್ಯದಲ್ಲಿ ಬಿಜೆಪಿ ಉತ್ತಮ ಸ್ಥಾನವನ್ನು ಪಡೆಯುವಲ್ಲಿ ಸಹಾಯ ಮಾಡಿದ್ರು. ಆ ವೇಳೆ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅವರು 2006ರ ಜೂನ್​​ 16ರಂದು ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. 2009ರ ಜೂನ್ 3ರಿಂದ 2014ರ ವರೆಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾಗಿ ಅರುಣ್​ ಜೇಟ್ಲಿಯವರು ಕರ್ತವ್ಯ ನಿಭಾಯಿಸಿದ್ರು.

2014ರಲ್ಲಿ ನರೇಂದ್ರ ಮೋದಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿ ಆಯ್ಕೆಯಾದ ಅರುಣ್​ ಜೇಟ್ಲಿಯವರು ಹಲವಾರು ಹೊಸತನಗಳಿಗೆ ಸಾಕ್ಷಿಯಾದ್ರು. ಹಿಂದಿಯಲ್ಲಿ ಬಜೆಟ್​​ ಮಂಡಿಸಿದ ಮೊದಲ ವಿತ್ತ ಸಚಿವರೆನಿಕೊಂಡ್ರು. ಹಣದುಬ್ಬರಗಳು ಉಂಟಾದಾಗ ಚಾಣಕ್ಷತನದಿಂದ ನಿಭಾಯಿಸಿದ್ರು. ಜಿಎಸ್​ಟಿ, ನೋಟ್​​ಬ್ಯಾನ್​​, ಮುದ್ರಾ ಲೋನ್​, ಜನಾಧನ್​​ ಖಾತೆ ಮುಂತಾದ ಯೋಜನೆಗಳು ಸಮರ್ಥವಾಗಿ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ರು. ಈ ವೇಳೆ ಅವರನ್ನು ಅನಾರೋಗ್ಯವೂ ಅತಿಯಾಗಿ ಕಾಡತೊಡಗಿತು. ಮೋದಿ ಸರ್ಕಾರದ ಅವಧಿಯ ಅಂತಿಮ ಬಜೆಟ್ ವೇಳೆಯೂ ಅರುಣ್ ಜೇಟ್ಲಿ ಅವರು ಆರೋಗ್ಯ ಸಮಸ್ಯೆ ಎದುರಿಸಿದ್ದ ಪರಿಣಾಮ ರೈಲ್ವೇ ಸಚಿವರಾಗಿದ್ದ ಪಿಯೂಷ್ ಗೋಯೆಲ್ ಅವರು ಬಜೆಟ್ ಮಂಡನೆ ಮಾಡಿದ್ರು. ಇದಕ್ಕೂ ಮುನ್ನ ಮೂತ್ರಪಿಂಡ ಸಮಸ್ಯೆಯಿಂದಾಗಿ ಮೂರು ತಿಂಗಳ ಕಾಲ ಸುದೀರ್ಘ ರಜೆ ಪಡೆದಿದ್ದ ಅರುಣ್ ಜೇಟ್ಲಿ ಅವರು ಆ ಬಳಿಕ ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ರು. ಈ ಅವಧಿಯಲ್ಲೂ ಸಚಿವ ಪಿಯೂಷ್ ಗೋಯಲ್ ಅವರು ಇಲಾಖೆಯ ಉಸ್ತುವಾರಿ ವಹಿಸಿಕೊಂಡಿದ್ರು. ಬಳಿಕ 2019ರ ಲೋಕಸಭಾ ಎಲೆಕ್ಷನ್​​ ವೇಳೆ ಅನಾರೋಗ್ಯ ಕಾರಣದಿಂದ್ಲೇ ಅವರು ಎಲೆಕ್ಷನ್​ನಿಂದ ದೂರ ಉಳಿದ್ರು. ಮಾತ್ರವಲ್ಲದೇ ನನಗೆ ಯಾವ್ದೇ ಖಾತೆ ಬೇಡವೆಂದು ಮೋದಿಯವರಿಗೆ ಪತ್ರವನ್ನು ಬರೆದಿದ್ರು.

ಇದೇ ಆಗಸ್ಟ್ 9ರಂದು ಉಸಿರಾಟದ ತೊಂದರೆ, ಕಿಡ್ನಿ ಸಂಬಂಧಿತ ಸಮಸ್ಯೆಗಳಿಂದಾಗಿ ಬಳಲುತ್ತಿದ್ದ ಅರುಣ್ ಜೇಟ್ಲಿ ಅವರನ್ನು ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ದಿನಗಳ ಕಾಲ ವೈದ್ಯರು ಪ್ರಯತ್ನಿಸಿದ್ರೂ ಕೂಡ ಚಿಕೆತ್ಸೆಗೆ ಸ್ಪಂದಿಸದ ಅರುಣ್​​ ಜೇಟ್ಲಿಯವ್ರು ಕೊನೆಯುಸಿರೆಳೆದ್ರು.

RELATED ARTICLES

Related Articles

TRENDING ARTICLES