INX ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾಜಿ ಹಣಕಾಸು ಸಚಿವ, ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂ ಅವರನ್ನು ಬಂಧಿಸಿದ್ದಾರೆ.
INX ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪಗಳಡಿ ಚಿದಂಬರಂ ಅವರನ್ನು ಜಾರಿ ನಿರ್ದೇಶನಾಲಯ (ಇಡಿ), ಸಿಬಿಐ ಪ್ರತ್ಯೇಕವಾಗಿ ತನಿಖೆ ನಡೆಸುತ್ತಿವೆ. ಈ ಎರಡು ಪ್ರಕರಣಗಳಿಗೆ ಸಂಬಂಧಪಟ್ಟಂತೆ ಪಿ.ಚಿದಂಬರಂ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ದಿಲ್ಲಿ ಹೈಕೋರ್ಟ್ ಮಂಗಳವಾರ ಚಿದಂಬರಂರ ಅರ್ಜಿಯನ್ನು ವಜಾಗೊಳಿಸಿತ್ತು.ಆಗ ಚಿದಂಬರಂ ಸುಪ್ರೀಂಕೋರ್ಟ್ ಮೊರೆ ಹೋಗಿದ್ರು. ಸುಪ್ರೀಂ ವಿಚಾರಣೆ ಮುಂದೂಡಿತ್ತು. ಬಳಿಕ ಸಿಬಿಐ ಅಧಿಕಾರಿಗಳು ಬಂಧನಕ್ಕೆ ಬಲೆ ಬೀಸಿದ್ದರು.
ತಲೆಮರೆಸಿಕೊಂಡಿದ್ದ ಚಿದಂಬರಂ ಅವರು ಬುಧವಾರ ದಿಢೀರ್ ಅಂತ ಪ್ರತ್ಯಕ್ಷರಾಗಿದ್ದರು. ಬಳಿಕ ಮನೆಯೊಳಗೆ ಸೇರಿಕೊಂಡಿದ್ರು. ಇಡಿ ಮತ್ತು ಸಿಬಿಐ ಅಧಿಕಾರಿಗಳನ್ನು ಒಳ ಬಿಟ್ಟುಕೊಂಡಿರಲಿಲ್ಲ. ಅಧಿಕಾರಿಗಳು ಕಾಂಪೌಂಡ್ ಹಾರಿ ಮನೆ ಪ್ರವೇಶಿಸಿದ್ದರು.ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ವಿಚಾರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ.
ಏನಿದು ಪ್ರಕರಣ? : ಯುಪಿಎ-1ರಲ್ಲಿ ವಿತ್ತ ಸಚಿವರಾಗಿದ್ದ ಚಿದಂಬರಂರವರು INX ಮೀಡಿಯಾ ಮತ್ತು ಏರ್ಸೆಲ್ ಮ್ಯಾಕ್ಸಿಸ್ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಲಂಚ ಪಡೆದಿದ್ದರು ಅನ್ನೋದು ಆರೋಪ. 2007ರಲ್ಲಿ INX ಮೀಡಿಯಾ ಸಂಸ್ಥೆಗೆ 305 ಕೋಟಿ ರೂಪಾಯಿ ವಿದೇಶಿ ಹೂಡಿಕೆಯನ್ನು ಪಡೆಯಲು ಅನುಮತಿ ನೀಡಲಾಗಿತ್ತು. ಇದಕ್ಕೆ ಆ ಸಂಸ್ಥೆಯು ನೀಡಿದ ಲಂಚವನ್ನು ನೇರವಾಗಿ ಚಿದಂಬರಂ ಅವರ ಮಗ ಕಾರ್ತಿ ಚಿದಂಬರಂ ಒಡೆತನದ ಕಂಪನಿಗಳಿಗೆ ಸಂದಾಯ ಮಾಡಲಾಗಿತ್ತು ಅನ್ನೋ ಆರೋಪವಿದೆ. ಇನ್ನು ಅದೇ ರೀತಿ 3,500 ಕೋಟಿ ರೂ ಮೌಲ್ಯದ ಏರ್ಸೆಲ್ ಮ್ಯಾಕ್ಸಿಸ್ ಕೇಸ್ನಲ್ಲೂ ಚಿದಂಬರಂ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದರು ಅನ್ನೋ ಆರೋಪ ಎದುರಿಸುತ್ತಿದ್ದಾರೆ.