ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಟ್ರಾಫಿಕ್ ಪೊಲೀಸರು ಮತ್ತೊಂದು ಹೊಸ ರೂಲ್ಸ್ ಜಾರಿಗೊಳಿಸಿದ್ದು ಇನ್ಮುಂದೆ ಬೈಕ್, ಸ್ಕೂಟರ್ಗೆ ಪೆಟ್ರೋಲ್ ಹಾಕಿಸ್ಬೇಕು ಅಂದ್ರೆ ಹೆಲ್ಮೆಟ್ ಇರಲೇಬೇಕಾಗಿದೆ.
ಹೌದು.ಹೆಲ್ಮೆಟ್ ಧರಿಸಿ ದ್ವಿ ಚಕ್ರ ವಾಹನ ಓಡಿಸುವಂತೆ ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ಕೂಡ ರೂಲ್ಸ್ ಬ್ರೇಕ್ ಮಾಡಿ ವಾಹನ ಓಡಿಸುವವರು ಇನ್ನೂ ಕಮ್ಮಿ ಆಗಿಲ್ಲ. ದ್ವಿ ಚಕ್ರ ವಾಹನ ಸವಾರರ ಈ ವರ್ತನೆಯಿಂದ ರೋಸಿ ಹೋಗಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಇದೀಗ ಈ ಸಮಸ್ಯೆಯ ನಿವಾರಣೆಗೆ ಹೊಸ ನಿಯಮವೊಂದನ್ನು ಜಾರಿಗೆ ತಂದಿದ್ದಾರೆ.
ಬೈಕ್, ಸ್ಕೂಟರ್ ಸವಾರರಿಗೆ ಈ ಹೊಸ ರೂಲ್ಸ್ ಅನ್ವಯಿಸಲಿದೆ. ಈ ರೂಲ್ಸ್ನ ಪ್ರಕಾರ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸಿದ್ದರೆ ಮಾತ್ರ ಅವರು ತಮ್ಮ ವಾಹನಕ್ಕೆ ಪೆಟ್ರೋಲ್ ಹಾಕಿಸಿಕೊಳ್ಳಬಹುದು. ಮುಂದಿನ ಸೋಮವಾರದಿಂದ್ಲೇ ಈ ನಿಯಮ ಜಾರಿಗೆ ಬರಲಿದೆ.
ಈ ಬಗ್ಗೆ ಬೆಂಗಳೂರು ಸಂಚಾರಿ ಪೊಲೀಸ್ ಪೂರ್ವ ವಿಭಾಗದ ಡಿಸಿಪಿ ಕೆ.ವಿ. ಜಗದೀಶ್ ಹೇಳಿಕೆ ನೀಡಿದ್ದು, ದಂಡ ವಿಧಿಸುತ್ತಿದ್ರೂ ಹೆಲ್ಮೆಟ್ ಬಳಸದೇ ವಾಹನ ಚಲಾಯಿಸುವವರ ಸಂಖ್ಯೆ ಹೆಚ್ಚಾಗ್ತಿದೆ. ಕಳೆದ ವರ್ಷ ಸ್ಕೂಟರ್, ಬೈಕ್ ಅಪಘಾತಗಳಲ್ಲಿ 150 ಮಂದಿ ದುರ್ಮರಣ ಹೊಂದಿದ್ದಾರೆ. ಕೇರಳ, ಆಂಧ್ರ ಸೇರಿದಂತೆ ದೇಶದ ವಿವಿಧೆಡೆ ಈಗಾಗ್ಲೇ ಈ ರೂಲ್ಸ್ ಜಾರಿಯಲ್ಲಿದೆ. ಇದೇ ಶನಿವಾರ ಪೆಟ್ರೋಲ್ ಬಂಕ್ ಮಾಲೀಕರ ಜೊತೆ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಬೆಂಗಳೂರಲ್ಲಿ ಬೈಕ್ ಅಪಘಾತದಿಂದ ಹೆಚ್ಚುತ್ತಿರುವ ಸಾವು ನೋವು ತಡೆಗೆ ಹೊಸ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಹೊಸ ರೂಲ್ಸ್ ಎಷ್ಟು ಫಲಪ್ರದವಾಗಲಿದೆ ಎಂದು ಕಾದು ನೋಡಬೇಕಾಗಿದೆ.