Sunday, May 5, 2024

4, 6, 6, 6, 4, 6.. 10 ಎಸೆತಗಳಲ್ಲಿ 39 ರನ್ ಚಚ್ಚಿದ ಮುಂಬೈ ಬ್ಯಾಟರ್, ಡೆಲ್ಲಿಗೆ 235 ರನ್ ಗುರಿ

ಬೆಂಗಳೂರು : ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಮುಂಬೈ ಬ್ಯಾಟರ್ ರೊಮಾರಿಯೊ ಶೆಫರ್ಡ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ನ 20ನೇ ಪಂದ್ಯದಲ್ಲಿ ಟಾಸ್ ಸೋತು ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿತು. ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 234 ರನ್​ ಗಳಿಸಿತು.

ಮುಂಬೈ ಪರ ಮಾಜಿ ನಾಯಕ ರೋಹಿತ್ ಶರ್ಮಾ 49, ಇಶಾನ್ ಕಿಶನ್ 42, ನಾಯಕ ಹಾರ್ದಿಕ್ ಪಾಂಡ್ಯ 39 ರನ್​ ಸಿಡಿಸಿದರು. ಟೀಮ್ ಡೇವಿಡ್ ಕೊನೆಯ ಓವರ್​ಗಳಲ್ಲಿ ವಿಧ್ವಂಸಕ ಬ್ಯಾಟಿಂಗ್ ನಡೆಸಿದರು. 21 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 2 ಬೌಂಡರಿಗಳೊಂದಿಗೆ ಅಜೇಯ 45 ರನ್ ಸಿಡಿಸಿದರು.

ಇನ್ನೂ ಹಾರ್ದಿಕ್ ಪಾಂಡ್ಯ ಬಳಿಕ ಕ್ರೀಸ್​ಗೆ ಬಂದ ರೊಮಾರಿಯೊ ಶೆಫರ್ಡ್ ಡೆಲ್ಲಿ ಕ್ಯಾಪಿಟಲ್ಸ್​ ಬೌಲರ್​ಗಳನ್ನು ಮನಬಂದಂತೆ ದಂಡಿಸಿದರು. ಅನ್ರಿಚ್ ನೋಕಿಯಾ ಎಸೆದ ಕೊನೆಯ ಓವರ್​ನಲ್ಲಿ ಮೊದಲ ಎಸೆತದಲ್ಲಿ 4, ಎರಡನೇ ಎಸೆತದಲ್ಲಿ 6, 3ನೇ ಎಸೆತದಲ್ಲಿ 6, 4ನೇ ಎಸೆತದಲ್ಲಿ 6, 5ನೇ ಎಸೆತದಲ್ಲಿ 4 ಹಾಗೂ ಕೊನೆಯ ಎಸೆತದಲ್ಲಿ 6 ಸಿಡಿಸಿದರು. ಈ ಓವರ್​ನಲದಲಿ ಬರೋಬ್ಬರಿ 32 ರನ್​ ಚಚ್ಚಿದರು. 10 ಎಸೆತಗಳಲ್ಲಿ 39 ರನ್ ಸಿಡಿಸಿ ತಂಡದ ಮೊತ್ತವನ್ನು 230 ರನ್​ ಗಡಿ ದಾಟಿಸಿದರು.

ಸೂರ್ಯಕುಮಾರ್ ಡಕ್​ ಔಟ್

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಕಣಕ್ಕಿಳಿದ ಮುಂಬೈ ಬ್ಯಾಟರ್ ಸೂರ್ಯ ಕುಮಾರ್ ಯಾದವ್ ಗೋಲ್ಡನ್ ಡಕ್ ಆದರು. ಇಂಜುರಿ ಬಳಿಕ ಈ ಆವೃತ್ತಿಯ ಮೊದಲ ಪಂದ್ಯ ಆಡಿದ ಸೂರ್ಯ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಇನ್ನು, ಡೆಲ್ಲಿ ಪರ ಅಕ್ಸರ್ ಪಟೇಲ್ 2, ನಾರ್ಜೆ 2 ಹಾಗೂ ಖಲೀಲ್ ಅಹ್ಮದ್ ಒಂದು ವಿಕೆಟ್ ಪಡೆದರು. ಡೆಲ್ಲಿ ಗೆಲುವಿಗೆ 235 ರನ್​ ಗಳಿಸಬೇಕಿದೆ.

RELATED ARTICLES

Related Articles

TRENDING ARTICLES