Saturday, April 27, 2024

ಡಿ.ಕೆ.ಸುರೇಶ್ ಬಳಿ ಇರುವ ಒಟ್ಟು ಆಸ್ತಿ ಚರಾಸ್ತಿ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಿಕೆ ಸುರೇಶ್‌ ಇಂದು ನಾಮಪತ್ರ ಸಲ್ಲಿಸಿದ್ದಾರೆ.ಈ ವೇಳೆ ಅವರು ನಮ್ಮ ಬಳಿ ಇರುವ ಆಸ್ತಿ ಚರಾಸ್ತಿ ಎಷ್ಟು ಎಂದು ಅವರು ಹೇಳಿಕೊಂಡಿದ್ದಾರೆ.

ಹೌದು, ಬರೋಬ್ಬರಿ 593.04 ಕೋಟಿ ರೂ. ನನ್ನ ಬಳಿ ಇದೆ ಎಂದು ಡಿ.ಕೆ ಸುರೇಶ್ ಆಸ್ತಿ ಘೋಷಣೆ ಮಾಡಿಕೊಂಡಿದ್ದಾರೆ.

ಅಫಿಡವಿಟ್‌ನಲ್ಲಿ ತಾವೊಬ್ಬ ಕೃಷಿಕ, ಉದ್ಯಮಿ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಹೇಳಿರುವ ಡಿಕೆ ಸುರೇಶ್‌ 2019ರಲ್ಲಿ 1.12 ಕೋಟಿ ರೂ. ಆದಾಯ ಗಳಿಸಿರುವುದಾಗಿ ತಿಳಿಸಿದ್ದಾರೆ. ಇದೇ ಆದಾಯ 2021ರಲ್ಲಿ 32.31 ಕೋಟಿ ರೂ.ಗೆ ಏರಿಕೆ ಕಂಡಿದ್ದರೆ, 2023ರಲ್ಲಿ ಅವರು 12.30 ಕೋಟಿ ರೂ. ಆದಾಯ ಗಳಿಸಿದ್ದಾರೆ.ತಮ್ಮ ಆದಾಯದಲ್ಲಿ ಬಾಡಿಗೆ, ವೇತನ, ಬಂಡವಾಳ ಗಳಿಕೆ, ಕೃಷಿ ಆದಾಯ ಹಾಗೂ ಬ್ಯಾಂಕ್‌ ಬಡ್ಡಿ ಸಹಿತ ಇತರ ಆದಾಯ ಸೇರಿರುವುದಾಗಿ ಅವರು ತಿಳಿಸಿದ್ದಾರೆ.

1.26 ಕೆಜಿ ಚಿನ್ನ

4.8 ಕೆಜಿ ಬೆಳ್ಳಿ, 1.26 ಕೆಜಿ ಚಿನ್ನವೂ ಅವರ ಬಳಿ ಇದ್ದು, ಇದರ ಮೌಲ್ಯ 23.45 ಲಕ್ಷ ರೂ. ಆಗಿದೆ. 73.58 ಲಕ್ಷ ರೂ. ಮೊತ್ತದ ಪೀಠೋಪಕರಣಗಳೂ ಅವರ ಮನೆಯಲ್ಲಿವೆ.

486.33 ಕೋಟಿ ರೂ. ಸ್ಥಿರಾಸ್ತಿ

486.33 ಕೋಟಿ ರೂ. ಮೊತ್ತದ ಸ್ಥಿರಾಸ್ತಿ ಇರುವುದಾಗಿಯೂ ಅವರು ಅಫಿಡವಿಟ್‌ನಲ್ಲಿ ಹೇಳಿದ್ದಾರೆ. ಇದರಲ್ಲಿ 209.96 ಕೋಟಿ ರೂ. ಮೊತ್ತದ ಆಸ್ತಿ ಪಿತ್ರಾರ್ಜಿತವಾಗಿ ಬಂದಿದ್ದು, 276.37 ಕೋಟಿ ರೂ. ಮೊತ್ತದ ಆಸ್ತಿ ನಾನು ಖರೀದಿಸಿರುವುದು ಎಂದು ತಿಳಿಸಿದ್ದಾರೆ. ತಾವು ಖರೀದಿಸಿದ ಆಸ್ತಿಯ ಖರೀದಿ ಬೆಲೆ 56.06 ಕೋಟಿ ರೂ. ಆಗಿದ್ದು, ಇದರ ಸದ್ಯದ ಮಾರುಕಟ್ಟೆ ಮೌಲ್ಯ 276.37 ಕೋಟಿ ರೂ. ಎಂದು ತಿಳಿಸಿದ್ದಾರೆ.

21 ಕೃಷಿ ಭೂಮಿ, 27 ಕೃಷಿಯೇತರ ಜಮೀನು ಹೊಂದಿರುವುದಾಗಿಯೂ ಡಿಕೆ ಸುರೇಶ್‌ ಹೇಳಿದ್ದಾರೆ. ಈ ಮೂಲಕ ನೂರಾರು ಎಕರೆ ಭೂಮಿಯ ಒಡೆಯರಾಗಿದ್ದಾರೆ. ಕೃಷಿ ಭೂಮಿಯ ಈಗಿನ ಮೌಲ್ಯ 32.75 ಕೋಟಿ ರೂ. ಆಗಿದ್ದರೆ, ಕೃಷಿಯೇತರ ಭೂಮಿ ಮೌಲ್ಯ 210.47 ಕೋಟಿ ರೂ. ಆಗಿದೆ. 9 ವಾಣಿಜ್ಯ ಸಂಕೀರ್ಣವೂ ಇವರಿಗಿದ್ದು, ಇವುಗಳ ಮೌಲ್ಯ 211.91 ಕೋಟಿ ರೂ. ಆಗಿದೆ. ಮೈಸೂರು ರಸ್ತೆಯಲ್ಲಿರುವ ಗ್ಲೋಬಲ್‌ ಮಾಲ್‌ ಇದರಲ್ಲಿ ಸೇರಿದೆ.

ಸದಾಶಿವನಗರದಲ್ಲಿ 25.82 ಕೋಟಿ ರೂ. ಮೌಲ್ಯದ ಮನೆ ಸೇರಿ ಒಟ್ಟು ಮೂರು ಮನೆಗಳು ಇವರ ಬಳಿ ಇದ್ದು, ಇವುಗಳ ಮೌಲ್ಯ 27.13 ಕೋಟಿ ರೂ. ಆಗಿದೆ.

150 ಕೋಟಿ ರೂ. ಸಾಲ

150.06 ಕೋಟಿ ರೂ. ಸಾಲ ಇರುವುದಾಗಿಯೂ ಡಿಕೆ ಸುರೇಶ್‌ ಹೇಳಿಕೊಂಡಿದ್ದಾರೆ. 57.27 ಕೋಟಿ ರೂ. ಮೊತ್ತದ ಸಾಲಕ್ಕೆ ಸಂಬಂಧಿಸಿದಂತೆ ವಿವಾದವೂ ಜಾರಿಯಲ್ಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಬ್ಯಾಂಕ್‌ನಿಂದ ಅವರು 20.04 ಕೋಟಿ ರೂ. ಸಾಲ ಪಡೆದಿದ್ದಾರೆ. ಶೋಭಾ ಡೆವಲಪರ್ಸ್‌ಗೆ 99.19 ಕೋಟಿ ರೂ., ಸಿಎಂಆರ್‌ ಟ್ರಸ್ಟ್‌ಗೆ 15 ಕೋಟಿ ರೂ., ಲುಲು ಮಾಲ್‌ಗೆ 3 ಕೋಟಿ ರೂ.ಗಳನ್ನು ಅವರು ನೀಡಬೇಕಿದೆ.

106 ಕೋಟಿ ರೂ. ಚರಾಸ್ತಿ,ಅಣ್ಣನಿಗೆ ನೀಡಿದ್ದಾರೆ 30 ಕೋಟಿ ರೂ. ಸಾಲ!

ಡಿಕೆ ಸುರೇಶ್‌ ಕೈಯಲ್ಲಿ 4.77 ಲಕ್ಷ ರೂ. ಹಣವಿದ್ದರೆ, ಒಟ್ಟು 106.71 ಕೋಟಿ ರೂ. ಚರಾಸ್ತಿ ಇದೆ. ಇದರಲ್ಲಿ ಬ್ಯಾಂಕ್‌ ಖಾತೆಯಲ್ಲಿ 16.61 ಕೋಟಿ ರೂ., ವಿವಿಧ ಹೂಡಿಕೆಗಳಲ್ಲಿ 2.14 ಕೋಟಿ ರೂ. ಇದೆ.

ಇನ್ನು ಕ್ವಾರಿ ಲೀಸ್‌ಗೆ ಕೊಟ್ಟಿರುವ ಹಣ ಸೇರಿ ಒಟ್ಟು 86.79 ಕೋಟಿ ರೂ. ಸಾಲ ನೀಡಿರುವುದಾಗಿ ಅವರು ತಿಳಿಸಿದ್ದಾರೆ. ಇದರಲ್ಲಿ ಅಣ್ಣ ಡಿಕೆ ಶಿವಕುಮಾರ್‌ಗೆ 30.08 ಕೋಟಿ ರೂ. ಸಾಲ ನೀಡಿದ್ದರೆ, ಡಿಕೆಶಿ ಪುತ್ರಿ ಐಶ್ವರ್ಯಾಗೆ 7.94 ಕೋಟಿ ರೂ., ಡಿಕೆಶಿ ಪುತ್ರ ಆಕಾಶ್‌ಗೆ 1.06 ಕೋಟಿ ರೂ., ತಾಯಿ ಗೌರಮ್ಮಗೆ 4.75 ಕೋಟಿ ರೂ., ಕುಣಿಗಲ್‌ ಶಾಸಕ ರಂಗನಾಥ್‌ ಪತ್ನಿ ಡಾ. ಸುಮಾ ರಂಘನಾಥ್‌ಗೆ 30 ಲಕ್ಷ ರೂ. ಸಾಲ ನೀಡಿದ್ದಾರೆ.

ಸದ್ಯ ಏಕಾಂಗಿಯಾಗಿರುವ ಡಿಕೆ ಸುರೇಶ್‌ ಬಳಿ ಯಾವುದೇ ವಾಹನಗಳಿಲ್ಲ. ತಮ್ಮ ಮೇಲೆ ಮೂರು ಕ್ರಿಮಿನಲ್‌ ಪ್ರಕರಣಗಳಿದ್ದು, ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡಿರುವುದಾಗಿಯೂ ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES