Tuesday, September 17, 2024

ಬೆಂಗಳೂರಿನ ಗೀತಂ ವಿವಿಯಲ್ಲಿ MURTI ಸಂಶೋಧನಾ ಕೇಂದ್ರ ಉದ್ಘಾಟನೆ

ಬೆಂಗಳೂರು : ದೊಡ್ಡಬಳ್ಳಾಪುರ ತಾಲೂಕಿನ ನಾಗದೇನಹಳ್ಳಿ ಬಳಿ ಇರುವ ಗೀತಂ ವಿವಿಯಲ್ಲಿ ಭಾಷಾಂತರ ಉಪಕ್ರಮಗಳ ಸಂಶೋಧನಾ ಕೇಂದ್ರದ ಬಹುಶಿಸ್ತೀಯ ಸಂಶೋಧನಾ ಕೇಂದ್ರವನ್ನು (Multidisciplinary Unit of Research on Translational Initiatives (MURTI) Research Centre)  ಬುಧವಾರ ಉದ್ಘಾಟನೆ ಮಾಡಲಾಯಿತು.

ಖ್ಯಾತ ವೈಮಾನಿಕ ಎಂಜಿನಿಯರ್ ಡಾ.ಕೋಟ ಹರಿನಾರಾಯಣ ಮತ್ತು ಚೆನ್ನೈನಲ್ಲಿ ಯುಎಸ್ ಕಾನ್ಸುಲೇಟ್ ನ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್ ಅವರು ಬೆಂಗಳೂರಿನ ಗೀತಂನಲ್ಲಿ MURTI ಸಂಶೋಧನಾ ಕೇಂದ್ರ ಉದ್ಘಾಟನೆ ಕಾರ್ಯ ನೆರವೇರಿಸಿ ಮಾತನಾಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಸಂಶೋಧನೆಯ ಮೂಲಭೂತ ತತ್ತ್ವಕ್ಕೆ ಅನುಗುಣವಾಗಿ ಅತ್ಯುತ್ತಮ ಶಿಕ್ಷಣ ಮತ್ತು ಅಭಿವೃದ್ಧಿಗೆ ಪೂರಕವಾಗಿ ಈ ಬಹುಶಿಸ್ತೀಯ ಸಂಶೋಧನಾ ಉಪಕ್ರಮವು ಆವಿಷ್ಕಾರಕ ಮತ್ತು ಅರ್ಥಪೂರ್ಣವಾದ ಬದಲಾವಣೆಯನ್ನು ತರುವ ನಿಟ್ಟಿನಲ್ಲಿ ಸಮಾನಮನಸ್ಕರ ಸಹಯೋಗವನ್ನು ಒಟ್ಟುಗೂಡಿಸಲು ನೆರವಾಗುತ್ತದೆ. ವಿವಿಧ ಕ್ಷೇತ್ರಗಳ ಸಂಶೋಧಕರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸಿ MURTI ಅನೇಕ ಸವಾಲುಗಳನ್ನು ಎದುರಿಸುವ ಸಲುವಾಗಿ ವಿವಿಧ ಹಿನ್ನೆಲೆಗಳ ಸಂಶೋಧಕರ ಸಾಮೂಹಿಕ ಪರಿಣತಿಯನ್ನು ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ.

ಖ್ಯಾತ ಎಂಜಿನಿಯರ್, ಶಿಕ್ಷಣ ತಜ್ಞ ಮತ್ತು ಹಗುರ ಯುದ್ಧ ವಿಮಾನ (LCA) ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ ಅವರು ಮಾತನಾಡಿ, ಸುಸ್ಥಿರ ತಂತ್ರಜ್ಞಾನವು ಹೇಗೆ ಬೆಳೆಯಬೇಕೆಂಬುದರ ಬಗ್ಗೆ ಸಂಪೂರ್ಣ ಮರುಚಿಂತನೆಯನ್ನು ನಡೆಸುವ ಅಗತ್ಯವಿದೆ. ಗೀತಂ ದಾಖಲೆಯ ಸಮಯದಲ್ಲಿ MURTI ಯನ್ನು ಸ್ಥಾಪಿಸಿರುವುದು ನನಗೆ ಸಂತೋಷ ಎನಿಸಿದೆ. 13 ಪ್ರಮುಖ ಕ್ಷೇತ್ರಗಳ ಸಹಕಾರದಿಂದ ಇದು ಆರಂಭವಾಗಿದೆ ಇದು ಕೇವಲ ಗೀತಂ ಗೆ  ಮಾತ್ರವಲ್ಲದೇ ಸಮಾಜಕ್ಕೂ  ಪ್ರಯೋಜನವಾಗುತ್ತದೆ ಎಂದರು.

ಇದನ್ನೂ ಓದಿ: ಇಂದು ಕನ್ನಡ ನಾಮಫಲಕ ಹಾಕದಿದ್ರೆ ಅಂಗಡಿ ಬಂದ್​: BBMP

MURTI ಮೂಲಭೂತ ಅಗತ್ಯತೆಯೂ ಆಗಿದೆ. ನಾವು ಇಂಧನವನ್ನು ಉತ್ಪಾದಿಸುವ ವಿಧಾನ ಮತ್ತು ಅದನ್ನು ಸಂಗ್ರಹಿಸುವ ವಿಧಾನ, ರವಾನಿಸುವ ವಿಧಾನ. ಹೀಗೆ ಎಲ್ಲವನ್ನೂ ಮರು ಪರಿಶೀಲಿಸುವ ಅಗತ್ಯವಿದೆ. ಕ್ರಿಸ್ಟೋಫರ್ ಡಬ್ಲ್ಯೂ ಹೋಡ್ಜಸ್ ಅವರ ಉಪಸ್ಥಿತಿಯು ಯುಎಸ್ ಅಕಾಡೆಮಿ, ಯುಎಸ್ ಉದ್ಯಮ, ಭಾರತೀಯ ಶಿಕ್ಷಣ, ಭಾರತೀಯ ಉದ್ಯಮ ಮತ್ತು ಸಾಮಾನ್ಯವಾಗಿ ಸಮಾಜದ ನಡುವಿನ ಬಲವಾದ ಸಹಯೋಗವನ್ನು ಖಚಿತಪಡಿಸುತ್ತದೆ ಎಂಬುದನ್ನು ನಾನು ನಂಬಿದ್ದೇನೆ ಎಂದೂ ಅವರು ಹೇಳಿದರು.

ಚೆನ್ನೈನ ಯುಎಸ್ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್ ಅವರು ಮಾತನಾಡಿ, MURTI ಸಂಸ್ಥೆಯು ನಾವೀನ್ಯತೆ ಮತ್ತು ಸಹಭಾಗಿತ್ವಕ್ಕಾಗಿ ನಮಗೆ ಅಗತ್ಯವಿರುವ ಸಂಯೋಜನೆ ಮತ್ತು ಕ್ರಿಯಾತ್ಮಕವಾದ ಸಂಶೋಧನೆಗೆ ಒಂದು ಮಾದರಿಯಾಗಿದೆ. ಇದು ನಮ್ಮ ಆರ್ಥಿಕತೆ ಮತ್ತು ಸಂಬಂಧವನ್ನು ವೃದ್ಧಿಸಲು ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಗೀತಂನ ಬೆಂಗಳೂರು ಕ್ಯಾಂಪಸ್ ನ ವಿ.ಸಿ ಪ್ರೊ.ಕೆಎನ್ಎಸ್ ಆಚಾರ್ಯ ಅವರು ಮಾತನಾಡಿ, ಭಾರತದಲ್ಲಿನ ಶೈಕ್ಷಣಿಕ ಸಂಸ್ಥೆಗಳಿಗೆ ಸಂಶೋಧನೆ ಮತ್ತು ಅಭಿವೃದ್ಧಿ ನಿರ್ಣಾಯಕ ಅಂಶಗಳಾಗಿವೆ. ಹೊಸತನವನ್ನು ಬೆಳೆಸುವ ನಿಟ್ಟಿನಲ್ಲಿ, ಜ್ಞಾನವನ್ನು ವೃದ್ಧಿ ಮಾಡುವಲ್ಲಿ ಮತ್ತು ಇತ್ತೀಚಿನ ಬೆಳವಣಿಗೆಗಳೊಂದಿಗೆ ಶೈಕ್ಷಣಿಕ ಪಠ್ಯಕ್ರಮಗಳು ಹಾಗೂ ಕಾರ್ಯಕ್ರಮಗಳನ್ನು ನವೀಕರಿಸುವ ನಿಟ್ಟಿನಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.

ಇದು ನಿರ್ಣಾಯಕ ಸವಾಲುಗಳನ್ನು ಪರಿಹಾರ ಮಾಡುತ್ತದೆ. ಇದರ ಜೊತೆಗೆ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಮತ್ತು ಉದ್ಯಮ, ಸಮಾಜದ ಶ್ರೇಯಸ್ಸಿಗೆ ಅಗತ್ಯವಾದ ಪರಿಹಾರಗಳನ್ನು ಒದಗಿಸುತ್ತದೆ. ವಿದ್ಯಾರ್ಥಿ-ಕೇಂದ್ರಿತ ಶಿಕ್ಷಣದ ದೃಷ್ಟಿಕೋನದಿಂದ ನೋಡಿದರೆ, MURTI ಉಪಕ್ರಮವು ವಿದ್ಯಾರ್ಥಿಗಳಿಗೆ ಕೇವಲ ಕಂಠಪಾಠ ಆಧಾರಿತ ಶಿಕ್ಷಣ ಪದ್ಧತಿಯನ್ನು ಮೀರಿ ಪ್ರಯೋಗಾಲಯದ ರಚನೆಗಳಲ್ಲಿ ನೈಜ ಪ್ರಪಂಚದ ಸಮಸ್ಯೆ ಪರಿಹಾರದ ಪ್ರಕ್ರಿಯೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ.

ವಿಮರ್ಶಾತ್ಮಕವಾದ ಚಿಂತನೆ ಮತ್ತು ಪ್ರಾಯೋಗಿಕ ತಾರ್ಕಿಕ ಕೌಶಲ್ಯಗಳ ಬೆಳವಣಿಗೆಯನ್ನು ಉತ್ತೇಜಿಸುತ್ತಾ, ಪ್ರಯೋಗ ಪ್ರಕ್ರಿಯೆಯ ನೈಸರ್ಗಿಕ ಭಾಗವಾಗಿ ವೈಫಲ್ಯಗಳನ್ನೂ ಸ್ವೀಕರಿಸುವ ಮನಸ್ಥಿತಿಯನ್ನು ಪೋಷಣೆ ಮಾಡುತ್ತದೆ ಎಂದು ತಿಳಿಸಿದರು.

ಉಪಕುಲಪತಿ ಪ್ರೊ. ದಯಾನಂದ ಸಿದ್ದವಟ್ಟಂ ಅವರು ಮಾತನಾಡಿ, ಖ್ಯಾತನಾಮ ವಿದ್ವಾಂಸರು, ಯುವ ಸಂಶೋಧಕರು ಮತ್ತು ಉತ್ಸಾಹಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ಅಂತರಶಿಸ್ತೀಯ ಸಂಶೋಧನಾ ಸಂಸ್ಕೃತಿಯನ್ನು ರಚಿಸುವ ಗುರಿಯನ್ನು MURTI ಹೊಂದಿದೆ. ಸ್ಥಳೀಯ ವಿಷಯವನ್ನು ಬಳಸಿಕೊಂಡು ಜಾಗತಿಕ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಇದು ಕೆಲಸ ಮಾಡಲಿದೆ. ವಿಶ್ವವಿದ್ಯಾನಿಲಯವು ಸಂಶೋಧನಾ ಮೂಲಸೌಕರ್ಯಗಳನ್ನು ಇನ್ನಷ್ಟು ಅಭಿವೃದ್ಧಿ ಮಾಡಲು ಮತ್ತು ದೇಶಾದ್ಯಂತ ಇರುವ ಯುವ, ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿಗಳನ್ನು ಎಕ್ಸಲೆನ್ಸ್ ಫೆಲೋಗಳನ್ನಾಗಿ ನೇಮಕ ಮಾಡಿಕೊಳ್ಳಲು MURTI 100 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದೆ. ಈ ಮೂಲಕ ಬೆಂಗಳೂರಿನ MURTI ಯನ್ನು ಜ್ಞಾನದ ಹಬ್ ಅನ್ನಾಗಿ ಮಾಡುವ ನಿಟ್ಟಿನಲ್ಲಿ MURTI ವಿಜ್ಞಾನ ಪಾರ್ಕ್ ಅನ್ನಾಗಿ ರೂಪಾಂತರಗೊಳಿಸಲು ಉದ್ದೇಶ ಹೊಂದಲಾಗಿದೆ. ಅಲ್ಲದೇ, ಈ ಪ್ರದೇಶದ ಸುಸ್ಥಿರ ಅಭಿವೃದ್ದಿ ನೆರವಾಗಲು ಅಗತ್ಯವಿರುವ ಜ್ಞಾನ ತಂತ್ರಜ್ಞಾನಗಳನ್ನು ತಯಾರು ಮಾಡುವ ಕೇಂದ್ರಬಿಂದುವಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಹಗುರ ಯುದ್ಧ ವಿಮಾನ (LCA) ತೇಜಸ್ ಯೋಜನೆಯ ಕಾರ್ಯಕ್ರಮ ನಿರ್ದೇಶಕ ಮತ್ತು ಮುಖ್ಯ ವಿನ್ಯಾಸಕಾರ ಡಾ.ಕೋಟ ಹರಿನಾರಾಯಣ, ಚೆನ್ನೈನಲ್ಲಿ ಯುಎಸ್ ಕಾನ್ಸುಲೇಟ್ ನ ಕಾನ್ಸುಲ್ ಜನರಲ್ ಕ್ರಿಸ್ಟೋಫರ್ ಡಬ್ಲ್ಯೂ. ಹೋಡ್ಜಸ್, ಗೀತಂ ಕುಲಪತಿ ಡಾ.ವೀರೇಂದ್ರ ಸಿಂಗ್ ಚೌಹಾಣ್, ಉಪಕುಲಪತಿ ಪ್ರೊ. ದಯಾನಂದ ಸಿದ್ದವಟ್ಟಂ ಮತ್ತು ಬೆಂಗಳೂರು ಕ್ಯಾಂಪಸ್ ನ ವಿಸಿ ಪ್ರೊ.ಕೆಎನ್ಎಸ್ ಆಚಾರ್ಯ ಸೇರಿದಂತೆ ಇನ್ನಿತರ ಗಣ್ಯರು ಹಾಜರಿದ್ದರು.

RELATED ARTICLES

Related Articles

TRENDING ARTICLES