Monday, December 23, 2024

ಆರಂಭದಲ್ಲೇ ಬಡವರ ಮನೆ ಮೇಲೆ ಪೌರುಷ

ಬೆಂಗಳೂರು : ಕೊನೆಗೂ ಎರಡನೇ ಹಂತದ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಪಾಲಿಕೆ ಆರಂಭಿಸಿದೆ. ಕೆಆರ್ ಪುರ ಹಾಗೂ ಮಹದೇವಪುರದ ಹಲವು ಕಡೆಗಳಲ್ಲಿ ಪಾಲಿಕೆ ಜೆಸಿಬಿಗಳು ಘರ್ಜಿಸಿದ್ವು. ಆದ್ರೆ, ಈ ಬಾರಿಯೂ ಬಡವರನ್ನೇ ಪಾಲಿಕೆ ಟಾರ್ಗೆಟ್ ಮಾಡ್ತಿದೆ ಎಂಬ ಆರೋಪ ಕೇಳಿಬಂತು. ಮಹದೇವಪುರದ ಶೀಲವಂತನ ಕೆರೆ ಸಂಪರ್ಕ ಕಲ್ಪಿಸುವ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಿಸಿಕೊಳ್ಳಲಾಗಿತ್ತು. ಆದ್ರೆೇ ಇದನ್ನು ತೆರವಿಗೆ ಮುಂದಾದಾಗ ಪಾಲಿಕೆ ದೊಡ್ಡವರನ್ನು ಸೇವ್ ಮಾಡಲು ರಾಜಕಾಲುವೆ ಪಥವನ್ನೇ ತಿರುಚಿದೆ ಎಂಬ ಆರೋಪ ಕೇಳಿಬಂತು. ಮನೆ ಮಾಲೀಕರು ನಾನಾ ರೀತಿಯಲ್ಲಿ ಬೇಡಿಕೊಂಡ್ರು. ಇನ್ನು ಮನೆಯಲ್ಲಿದ್ದ ಇಳಿವಯಸ್ಸಿನ ಅಜ್ಜಿ ತೆರವಿಗೆ ಅಡ್ಡ ಕುಳಿತ ಪ್ರಸಂಗವೂ ನಡೆಯಿತು. ಆದ್ರೆ, ಪಾಲಿಕೆ ಅಧಿಕಾರಿಗಳು ಇದ್ಯಾವುಕ್ಕೂ ಕ್ಯಾರೆ ಎನ್ನದೇ ಮನೆಯನ್ನು ಒಡೆದು ಕೆಡವಿದ್ರು.

ಇನ್ನು ಕೆಆರ್ ಪುರ ವ್ಯಾಪ್ತಿಯ ಕೇಂಬ್ರಿಡ್ಜ್ ಕಾಲೇಜು ಹಿಂಭಾಗ ಒತ್ತುವರಿ ತೆರವು ಕಾರ್ಯಾಚರಣೆ ವೇಳೆಯೂ ಮನೆ ಮಾಲೀಕರುಗಳಿಂದ ತೀವ್ರ ವಿರೋಧ ಕೇಳಿಬಂತು. ಮನೆ ತೆರವಿಗೆ ಮುಂದಾದ ಪಾಲಿಕೆ ಅಧಿಕಾರಿಗಳ ವಿರುದ್ಧ ಮಹಿಳೆಯರು ಕೆಂಡ ಕಾರಿದ್ರು. ಇನ್ನು ಈ ಬಾರಿಯೂ ಒತ್ತುವರಿ ತೆರವು ವೇಳೆ ಬಡವರ ಮೇಲೆಯೇ  ಪಾಲಿಕೆ ಗಧಾಪ್ರಹಾರ ಮಾಡ್ತಿದೆ ಎಂಬ ಆರೋಪ ಆರಂಭದಲ್ಲೇ ಕೇಳಿಬಂತು. ಆದ್ರೆ, ಪಾಲಿಕೆ ಇದಕ್ಕೆ ಬೇರೆಯದ್ದೇ ಕತೆ ಹೇಳಿ ಸಮಜಾಯಿಷಿ ನೀಡುವ ಪ್ರಯತ್ನವನ್ನೂ ಮಾಡ್ತು. ಸ್ಟೇ ಇದ್ದ ಆಸ್ತಿ ತೆರವಿಗೆ ಇನ್ನೊಮ್ಮೆ ತಹಶೀಲ್ದಾರ್ ನೋಟೀಸ್ ಕೊಟ್ಟು ಜಂಟಿ ಸರ್ವೆ ಮಾಡಿ ತೆರವು ಮಾಡ್ತೀವಿ. ಇದಕ್ಕೆ ಎರಡು ದಿನ ಕಾಲಾವಕಾಶ ಬೇಕು ಅಂತ ಪಾಲಿಕೆ ಮುಖ್ಯ ಇಂಜಿನಿಯರ್ ಬಸವರಾಜ ಕಬಾಡೆ ಹೇಳಿಕೆ ನೀಡಿದ್ರು.

ಒಟ್ಟಿನಲ್ಲಿ ಪಾಲಿಕೆ ರಾಜಕಾಲುವೆ ತೆರವು ಕಾರ್ಯಾಚರಣೆಯನ್ನು ಪುನಃ ಆರಂಭಿಸಿದೆ. ಮಂಗಳವಾರವೂ ಮಹದೇವಪುರ ವಲಯದ 10ಕ್ಕೂ ಹೆಚ್ಚುಕಡೆ ತೆರವು ಮಾಡಲು ಪಟ್ಟಿ ಸಿದ್ದಪಡಿಸಿಕೊಂಡಿದೆ. ಆದ್ರೆ, ದೊಡ್ಡ ದೊಡ್ಡ ನುಂಗಣ್ಣರ ಮನೆಗಳ ಮೇಲೆ ಅದ್ಯಾವಾಗ ಪಾಲಿಕೆ ಜೆಸಿಬಿಗಳು ಘರ್ಜಿಸ್ತವೆ ಅನ್ನೋದು ಸದ್ಯ ಪ್ರತಿಯೊಬ್ಬರ ಪ್ರಶ್ನೆಯಾಗಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES