Friday, April 26, 2024

ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೇ GST ದೋಖಾ..!

ಬೆಂಗಳೂರು : ಬಿಬಿಎಂಪಿಯಲ್ಲಿ ಹಳೇ ಕಲ್ಲಿಗೆ ಹೊಸ ಬಿಲ್ಲು ಎನ್ನುವುದು ಬಹಳ ಹಿಂದಿನಿಂದಲೂ ಇರುವ ಕುಖ್ಯಾತಿ. ಈಗ ಆ ಸಾಲಿಗೆ ಹೊಸ ಆರೋಪವೊಂದು ಕೇಳಿ ಬಂದಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುವ ಯಾವ ಕಾಮಗಾರಿಗೂ GST ಮೊತ್ತ ಪಾವತಿಯಾಗುತ್ತಿಲ್ಲ ಎಂದು ಬೆಂಗಳೂರು ಮಾಹಿತಿ ಹಕ್ಕು ಕೇಂದ್ರ ಗಂಭೀರವಾಗಿ ಆರೋಪಿಸಿದೆ. ಬಿಬಿಎಂಪಿಯಲ್ಲಿ ನೀಡಲಾಗುತ್ತಿರುವ ಯಾವ ಟೆಂಡರ್‌ಗೂ GST ಕಟ್ಟಲಾಗುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಕೇಂದ್ರದ One Nationa – One Tax ಅಡಿಯಲ್ಲಿ ಕಡ್ಡಾಯವಾಗಿ GST ಕಟ್ಟಬೇಕು ಎಂಬ ನಿಯಮವಿದೆ.ಆದರೆ,ಬಿಬಿಎಂಪಿಯಲ್ಲಿ ಬಿಡುಗಡೆಯಾಗುತ್ತಿರುವ ಎಲ್ಲಾ ಕಾಮಗಾರಿಯ ಬಿಲ್‌ಗಳಿಗೆ GST ಇನ್ವಾಯ್ಸ್ ಮಾಡಲಾಗುತ್ತಿಲ್ಲ ಎಂದು ಮಾಹಿತಿ ಹಕ್ಕು ಕೇಂದ್ರದ ಪದಾಧಿಕಾರಿಗಳು ದೂರಿದ್ದಾರೆ.

ಈ ಮೂಲಕ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಅಧಿಕಾರಿಗಳು ಸೇರಿ ಸರ್ಕಾರಕ್ಕೆ GST ಕಟ್ಟದೆ ಮೋಸ ಮಾಡುತ್ತಿದ್ದಾರಂತೆ. ಬಿಬಿಎಂಪಿಯ ದಾಸರಹಳ್ಳಿ ವಲಯದಲ್ಲಿ ಮಾಡಲಾದ ರಸ್ತೆ ಕಾಮಗಾರಿಯ ಬಿಲ್‌ನಲ್ಲಿ ಈ‌ ವಿಚಾರ ಬಹಿರಂಗವಾಗಿದೆ.ಈ ಬಗ್ಗೆ ಮಾಹಿತಿ ಹಕ್ಕು ಕೇಂದ್ರದಿಂದ ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಇಮೇಲ್ ಮೂಲಕ ದೂರು ನೀಡಲಾಗಿದೆ. 2017ರಿಂದ ಈಚೆಗೆ ಸುಮಾರು ಸಾವಿರ ಕೋಟಿಗೂ ಅಧಿಕ ಮೊತ್ತದ GST ಕೇಂದ್ರಕ್ಕೆ ಕಟ್ಟದೆ ಯಾಮಾರಿಸಿದ್ದಾರೆ ಎಂದು ದಾಖಲೆ ಸಮೇತ ಮಾಹಿತಿ ಹಕ್ಕು ಹೋರಾಟಗಾರ ವೀರೇಶ್ ಆರೋಪಿಸಿದ್ದಾರೆ.

ಪಾಲಿಕೆಯಿಂದ ಟೆಂಡರ್ ಪಡೆದುಕೊಳ್ಳುವ ಗುತ್ತಿಗೆದಾರರು, ಬಿಲ್ ಪಾವತಿಗಾಗಿ ಕೇಳಿಕೊಳ್ಳುವಾಗ ಕಾಮಗಾರಿಗೆ ಬಳಿಸಿದ ಮೆಟೀರಿಯಲ್‌ಗಳ ಬಗೆಗಿನ ಯಾವ ಮಾಹಿತಿಯನ್ನೂ ನೀಡಲಾಗುತ್ತಿಲ್ಲ. ಕೇಂದ್ರದ ಪ್ರಕಾರ ಒಟ್ಟು 18% GST ಪಾವತಿಸಬೇಕು.ಆದರೆ, ಮೆಟೀರಿಯಲ್ ಇನ್ವಾಯಿಸ್ ನೀಡದೆ ಕೇವಲ 1% ನಷ್ಟು ಮಾತ್ರ ಟ್ಯಾಕ್ಸ್ ಪಾವತಿ ಮಾಡುತ್ತಿದ್ದಾರೆ. ಮೆಟೀರಿಯಲ್ ಇನ್ವಾಯಿಸ್ ಕೇಳಿ ಪಡೆದುಕೊಳ್ಳಬೇಕಾದ ಬಿಬಿಎಂಪಿ ಅಧಿಕಾರಿಗಳು ಕೂಡ ಗುತ್ತಿಗೆದಾರರ ಜೊತೆಗೂಡಿ ಇನ್ವಾಯಿಸ್ ಇಲ್ಲದೆ ಬಿಲ್ ನೀಡಿ, ಗುತ್ತಿಗೆದಾರರಿಂದ ಕಮಿಷನ್ ಪಡೆಯುತ್ತಿದ್ದಾರೆ ಎಂಬುವುದು ಒಟ್ಟಾರೆ ಆರೋಪದ ಒಳತಿರುಳು. ಸದ್ಯ ಬಿಬಿಎಂಪಿ ಹಾಗೂ ಗುತ್ತಿಗೆದಾರರ ಮೇಲೆ ಈ ಗಂಭೀರ ಆರೋಪ ಕೇಳಿ ಬಂದಿದ್ದು, ಪ್ರಧಾನಿ ಕಚೇರಿಗೂ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಭ್ರಷ್ಟ ಅಧಿಕಾರಿಗಳು ಹಾಗೂ ದೋಖಾ ಮಾಡಿದ ಗುತ್ತಿಗೆದಾರರ ಮೇಲೆ ಕೇಂದ್ರ ಸರ್ಕಾರ ಯಾವ ಕ್ರಮ ತೆಗೆದುಕೊಳ್ತಾರೋ ಅಂತ ಕಾದು ನೋಡ್ಬೇಕಿದೆ.

ಮಲ್ಲಾಂಡಹಳ್ಳಿ ಶಶಿಧರ್ ಪವರ್ ಟಿವಿ ಬೆಂಗಳೂರು

RELATED ARTICLES

Related Articles

TRENDING ARTICLES