ಮಂಗಳೂರು : ಬೆಂಗಾವಲು ವಾಹನವಿರಿಸಿಕೊಂಡು ಪಿಕಪ್ ವಾಹನದಲ್ಲಿ ಗಾಂಜಾ ಸಾಗಿಸುತ್ತಿದ್ದ ಕೇರಳ ಮೂಲದ ಇಬ್ನರು ಖದೀಮರನ್ನ ಮಂಗಳೂರು ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ಮೂಲಕ ಬೇಟೆಯಾಡಿದ್ದಾರೆ. ಆರೋಪಿಗಳು ಮಂಗಳೂರು ಹಾದಿಯಾಗಿ ಕೇರಳಕ್ಕೆ 132 ಕೆಜಿ ಗಾಂಜಾ ಸಾಗಿಸುತ್ತಿದ್ದ ಸಂದರ್ಭ ಮಂಗಳೂರು ನಗರದ ಪಂಪ್ವೆಲ್ ಬಳಿಯ ತಾರೆತೋಟ ಎಂಬಲ್ಲಿ ಬಂಧಿಸಿದ್ದಾರೆ.
ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ ಗ್ರಾಮದ ಉಪ್ಪಳ ನಿವಾಸಿ ಕಲಂದರ್ ಮಹಮ್ಮದ್ ಶಾ (35) ಹಾಗೂ ಕುಂಜತ್ತೂರು ಗ್ರಾಮ ಉದ್ಯಾವರ ನಿವಾಸಿ ಮೊಯ್ದೀನ್ ಅನ್ಸಾರ್ (27) ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಮಂಗಳೂರು ಹಾಗೂ ಕಾಸರಗೋಡು ಜಿಲ್ಲೆಗಳಿಗೆ ಬೃಹತ್ ಪ್ರಮಾಣದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದರು. ಇದನ್ನು ಪತ್ತೆ ಹಚ್ಚಿರುವ ಸಿಸಿಬಿ ಘಟಕದ ಪೊಲೀಸರು 132 ಕೆ.ಜಿ. ಗಾಂಜಾ ತುಂಬಿದ ಗೋಣಿ ಚೀಲ ಸಹಿತ ಸಾಗಾಟಕ್ಕೆ ಬಳಸಿದ ಪಿಕಪ್ ಹಾಗೂ ಬೆಂಗಾವಲು ವಾಹನವಾಗಿ ಬಳಸಿದ್ದ ಮಾರುತಿ ಸ್ವಿಫ್ಟ್ ಹಾಗೂ ಎರಡು ಮೊಬೈಲ್ ಫೋನ್ ಗಳನ್ನ ವಶಪಡಿಸಿಕೊಂಡಿದ್ದಾರೆ. ಸ್ವಾಧೀನ ಪಡಿಸಿಕೊಂಡಿರುವ ಸ್ವತ್ತಿನ ಒಟ್ಟು ಮೌಲ್ಯ 43 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಇರ್ಷಾದ್ ಕಿನ್ನಿಗೋಳಿ
ಪವರ್ ಟಿವಿ, ಮಂಗಳೂರು