Tuesday, October 29, 2024

SDPI, PFI ಸಂಘಟನೆಗಳ ನಿಷೇಧದ ಬಗ್ಗೆ ಸಚಿವ ಈಶ್ವರಪ್ಪ ಹೇಳಿದ್ದೇನು?

ಶಿವಮೊಗ್ಗ :  ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳ ನಿಷೇದಧ ಬಗ್ಗೆ ಆ.20 ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಗಲಭೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಪಕ್ಷ ಸತ್ಯಶೋಧನಾ ಸಮಿತಿ ರಚಿಸಿದ್ದು, ಸತ್ಯ ಹೊರತರಲಿ ಎಂಬುದೇ ನನ್ನ ಆಸೆ ಎಂದಿದ್ದಾರೆ.

ಗಲಭೆಗೆ ಕಾರಣವಾದ ಎಸ್‍ಡಿಪಿಐ ಮತ್ತು ಪಿಎಫ್‍ಐ ಸಂಘಟನೆಗಳನ್ನು ನಿಷೇಧಿಸುದಂತೆ ಒತ್ತಡ ಹೆಚ್ಚಾಗುತ್ತಿದೆ. ಅದರಲ್ಲೂ ಬೆಂಗಳೂರಿನಲ್ಲಿ ನಡೆದ ಗಲಭೆಯನ್ನು ಕಾಂಗ್ರೆಸ್ ನಾಯಕರು ಇದುವರೆಗೂ ಖಂಡಿಸಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ನಡೆದುಕೊಳ್ಳುತ್ತಿರುವ ರೀತಿ ನೋವು ತಂದಿದೆ. ಇನ್ನಾದರೂ ಕಾಂಗ್ರೆಸ್ ನಾಯಕರು ರಾಷ್ಟ್ರೀಯ ಮೌಲ್ಯದ ರಾಜಕಾರಣ ಮಾಡುವತ್ತ ಹೆಜ್ಜೆ ಇಡಬೇಕೆಂದು ಹೇಳಿದರು. 

ಅದರಂತೆ, ನಿನ್ನೆ ಶೃಂಗೇರಿಯಲ್ಲಿ ಶ್ರೀ ಶಂಕರಚಾರ್ಯರ ವಿಗ್ರಹದ ಗೋಪುರದ ಮೇಲೆ ಎಸ್‍ಡಿಪಿಐ ಸಂಘಟನೆಯ ಬಾವುಟ ಹಾಕಿರುವ ಬಗ್ಗೆ ಹಾಗೂ ಬೆಂಗಳೂರಿನಲ್ಲಿ ನಡೆದ ಗಲಭೆಯಲ್ಲ ಅದು ಮೌಲ್ಯದ ಮೇಲೆ ನಡೆದ ಹಲ್ಲೆ. ಇದರ ಬಗ್ಗೆಯೂ ಸಹ ಕಾಂಗ್ರೆಸ್ ನಾಯಕರು ಮಾತನಾಡಿಲ್ಲ ಎಂದು ಈಶ್ವರಪ್ಪ ದೂರಿದ್ದಾರೆ.

ಗಲಭೆಕೋರರು ಕೆ.ಜೆ ಹಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಪೊಲೀಸರನ್ನು ಕೊಲೆ ಮಾಡಿ ಎಂಬ ಮಾತುಗಳು ವಿಡಿಯೋದಲ್ಲಿ ದಾಖಲಾಗಿದ್ದು, ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಯವರು ಮಾಧ್ಯಮದವರ ಮುಂದೆ ನನ್ನನ್ನು ಕೊಲೆಯೂ ಮಾಡುತ್ತಿದ್ದರು ಎಂದು ಹೇಳಿಕೆ ನೀಡಿದ್ದರೂ ಸಹ ಕಾಂಗ್ರೆಸ್ ಮುಖಂಡರು ಖಂಡನೆ ಮಾಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ನಾಯಕರು ರಾಷ್ಟ್ರೀಯ ಮೌಲ್ಯದ ರಾಜಕಾರಣ ಮಾಡಿದ್ದರೆ ಬೆಂಕಿ ಹಚ್ಚುವ ಪ್ರಕರಣ ನಡೆಯುತ್ತಿರಲಿಲ್ಲ. ನನ್ನ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ನನ್ನ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಗಲಭೆ ನಡೆದು 10 ಗಂಟೆಯಾದರೂ ಪ್ರತಿಕ್ರಿಯೆ ನೀಡದ ಡಿ.ಕೆ.ಶಿವಕುಮಾರ್ ಅವರೇ ಇದೇನಾ ನಿಮ್ಮ ಮೌಲ್ಯ ರಾಜಕಾರಣ ಎಂದು ಟೀಕಿಸಿದ್ದಾರೆ.

 ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಇದುವರೆಗೂ ಹೇಳಿಕೆ ನೀಡದಿರುವುದು ಖಂಡನೀಯ. ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿಯವರು ಭಯದಿಂದಾಗಿ ಇದುವರೆಗೂ ದೂರು ನೀಡಿಲ್ಲ. ಶಾಸಕರ ಮನೆಗೆ ಹೋಗಿ ಕಾಂಗ್ರೆಸ್ ನಾಯಕರು ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದ ಅವರು, ಖಂಡನೆ ಮಾಡದೇ ಕೆಟ್ಟ ರಾಜಕಾರಣ ಮಾಡದಿರಿ ಎಂದಿದ್ದಾರೆ.

ನವೀನ್ ಬಿಜೆಪಿ ಕಾರ್ಯಕರ್ತ ಎಂದು ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದು, ನವೀನ್ ಕಾಂಗ್ರೆಸ್ ಹಾಗೂ ಬಿಜೆಪಿ ಬಗ್ಗೆಯೂ ಫೇಸ್‍ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾನೆ. ಹೊಣೆಗಾರಿಕೆಯಿಂದ ನುಸುಳಿಕೊಳ್ಳಲು ನವೀನ್‍ನನ್ನು ಬಿಜೆಪಿ ಕಾರ್ಯಕರ್ತ ಎಂದೇ ಕಾಂಗ್ರೆಸ್ ಬಿಂಬಿಸುತ್ತಿದೆ ಎಂದು ಆಪಾದಿಸಿದ್ಧಾರೆ.

ಡಿ.ಕೆ.ಶಿವಕುಮಾರ್ ಅವರಿಗೆ ಮತಾಂಧ ಮುಸ್ಲಿಮರ ಬಗ್ಗೆ ಒಲವು ಜಾಸ್ತಿ. ಈ ರಾಜಕಾರಣವನ್ನು ಕಾಂಗ್ರೆಸ್ ಕೈಬಿಡಬೇಕು. ಬೆಂಗಳೂರು ಘಟನೆಗೆ ಸಂಬಂಧಿಸಿದಂತೆ ಕೋಮುಗಲಭೆ ಎಂದು ಹೇಳಿರುವ ಅನುಭವಿ ನಾಯಕ ಸಿದ್ದರಾಮಯ್ಯ ಅವರಿಗೆ ಒಂದನೇ ತರಗತಿಯಿಂದ ಪಾಠ ಮಾಡಬೇಕಾಗಿದೆ. ಹಿರಿಯರು ಕೂತು ಶಾಂತಿ ಕಾಪಾಡಬೇಕು ಎಂದಿರುವ ಸಿದ್ದರಾಮಯ್ಯ ಅವರು, ಹಿಂದು ಸಂಘಟನೆಗಳು ಈ ಪ್ರಯತ್ನ ಮಾಡಿದ್ದರೆ ಈ ಹೇಳಿಕೆ ನೀಡುತ್ತಿದ್ದಿರಾ ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ಅಲ್ಲದೇ, ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರು ತಮ್ಮ ಹೇಳಿಕೆಯಲ್ಲಿ ದಲಿತ ಪದ ಬಳಸಿರುವುದಕ್ಕೆ ಸಿದ್ದರಾಮಯ್ಯ ಅವರು ಟೀಕೆ ಮಾಡಿದ್ದು, ಅವರು ದೇಶದ ಹಾಗೂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದರೆ. ಗಲಭೆಯಲ್ಲಿ ಮೃತಪಟ್ಟವರು ಅಮಾಯಕರು ಎಂದು ಹೇಳಿರುವ ಶಾಸಕ ಜಮೀರ್ ಅಹಮ್ಮದ್​ ರಾಷ್ಟ್ರದ್ರೋಹಿ ಎಂದು ಜರಿದಿದ್ದಾರೆ.

RELATED ARTICLES

Related Articles

TRENDING ARTICLES