ಬೆಂಗಳೂರು: ಲಿಫ್ಟ್ ಕೊಡುವ ನೆಪದಲ್ಲಿ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಆರೋಪಿಯನ್ನು HSR ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ತಮಿಳುನಾಡು ಮೂಲದ ಮುಕೇಶ್ವರನ್ ಎಂದು ಗುರುತಿಸಲಾಗಿದೆ. ಆರೋಪಿಯು ನಗರದಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಆಗಿ ಕೆಲಸ ಮಾಡಿಕೊಂಡಿದ್ದ. ಕೃತ್ಯದ ಬಳಿಕ ಆಡುಗೋಡಿಯ ಚಂದ್ರಪ್ಪ ನಗರದಲ್ಲಿರುವ ತನ್ನ ಮನೆಯಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ: ಸಿಎಂ ಪರ ಘಟಾನುಘಟಿ ವಕೀಲರಿಂದ ವಾದ ಮಂಡನೆ
ಶನಿವಾರ ರಾತ್ರಿ ತನ್ನ ಸ್ನೇಹಿತರೊಂದಿಗೆ ಕೋರಮಂಗಲದ ಪಬ್ಗೆ ಪಾರ್ಟಿಗೆ ಬಂದಿದ್ದ ಯುವತಿ, ಮನೆಗೆ ತೆರಳುವಾಗ ಆರೋಪಿಯ ಬಳಿ ಲಿಫ್ಟ್ ಕೇಳಿದ್ದಳು. ಲಿಫ್ಟ್ ಕೊಡುವ ನೆಪದಲ್ಲಿ ಆಕೆಯನ್ನು ಬೊಮ್ಮನಹಳ್ಳಿ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ ಆರೋಪಿ, ಯುವತಿಯ ಬಟ್ಟೆ ಹರಿದು ದುಷ್ಕೃತ್ಯಕ್ಕೆ ಯತ್ನಿಸಿದ್ದ. ಈ ವೇಳೆ ಯುವತಿಯೂ ಸಹ ಪ್ರತಿರೋಧವೊಡ್ಡಿದ್ದು, ಆತನ ಬಟ್ಟೆ ಹರಿದು, ಮುಖಕ್ಕೆ ಪರಚಿದ್ದಳು.
ಇದೇ ವೇಳೆ SOS ಅಲರ್ಟ್ ಆಧರಿಸಿ ಯುವತಿಯ ಸ್ನೇಹಿತರು ಸ್ಥಳಕ್ಕೆ ಬರುತ್ತಿದ್ದಂತೆ, ಆರೋಪಿ ಓಡಿ ಹೋಗಿದ್ದ. ಸದ್ಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ಬಂಧಿಸಿದ್ದಾರೆ.