ಪ್ಯಾರಿಸ್: ಚೊಚ್ಚಲ ಒಲಿಂಪಿಕ್ಸ್ ಆಡುತ್ತಿರುವ ಅಮನ್ ಸೆಹ್ರಾವತ್ ಪುರುಷರ 57 ಕೆಜಿ ತೂಕ ಕುಸ್ತಿ ವಿಭಾಗದಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ಕಂಚಿನ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ಪೋರ್ಟೊ ರಿಕೊ ಕುಸ್ತಿಪಟು ಡೇರಿಯನ್ ಟೊಯಿ ಕ್ರೂಜ್ ಅವರನ್ನು 13-5 ರಿಂದ ಏಕಪಕ್ಷೀಯವಾಗಿ ಸೋಲಿಸುವ ಮೂಲಕ ಅಮನ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.
ಇದನ್ನೂ ಓದಿ: Paris Olympics : ಭಾರತಕ್ಕೆ ಮತ್ತೊಂದು ಪ್ರಶಸ್ತಿ: ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ ನೀರಜ್ ಚೋಪ್ರ
ಇದರೊಂದಿಗೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಆರನೇ ಪದಕ ದಕ್ಕಿದೆ. ಒಟ್ಟಾರೆ, ಈ ಕ್ರೀಡಾಕೂಟದಲ್ಲಿ ಇದು ಭಾರತಕ್ಕೆ 5 ನೇ ಕಂಚಿನ ಪದಕವಾಗಿದ್ದರೆ, ಕುಸ್ತಿಯಲ್ಲಿ ಭಾರತಕ್ಕೆ ಸಿಕ್ಕ ಮೊದಲ ಪದಕವಾಗಿದೆ.
ಭಾರತಕ್ಕೆ 6ನೇ ಪದಕವನ್ನು ಗೆದ್ದುಕೊಟ್ಟ ಕುಸ್ತಿಪಟು ಅಮಾನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದು, “ನಮ್ಮ ಕುಸ್ತಿಪಟುಗಳು ನಮಗೆ ಇನ್ನಷ್ಟು ಹೆಮ್ಮೆ ತಂದಿದ್ದಾರೆ! ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಅಮನ್ ಸೆಹ್ರಾವತ್ ಅವರಿಗೆ ಅಭಿನಂದನೆಗಳು. ಅವರ ಸಮರ್ಪಣೆ ಮತ್ತು ದೃಢತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇಡೀ ರಾಷ್ಟ್ರವು ಈ ಅದ್ಭುತ ಸಾಧನೆಯನ್ನು ಆಚರಿಸುತ್ತಿದೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.