Thursday, September 19, 2024

ವಿನೇಶ್ ಫೋಗಟ್‌ ಫೈನಲ್​ನಲ್ಲಿ ಗೆದ್ದರೂ ಗೆಲ್ಲದಿದ್ದರೂ ಭಾರತೀಯರ ಪಾಲಿಗೆ ಚಿನ್ನವಿದಂತೆ

ವಿನೇಶ್ ಫೋಗಟ್‌ ದೆಹಲಿಯ ನಡುಬೀದಿಯಲ್ಲಿ ಕುಳಿತು ನೆಲಕ್ಕಿಳಿಸಿದ್ದ ಕಣ್ಣೀರನ್ನು ಯಾರು ಗಮನಿಸಿದ್ದರೋ ಗೊತ್ತಿಲ್ಲ ಆದರೆ, ಇಂದು ಇಡೀ ದೇಶದ ಜನರ ಚಿತ್ತವಿರುವುದು ಮಾತ್ರ ಫೋಗಟ್‌ ಅವರತ್ತ. ಪ್ಯಾರಿಸ್‌ ಒಲಿಂಪಿಕ್ಸ್‌ನ 50 ಕೆ.ಜಿ ವಿಭಾಗದ ಫ್ರೀಸ್ಟೈಲ್‌ ಕುಸ್ತಿ ಸ್ಪರ್ಧೆಯ ಫೈನಲ್‌ಗೆ ಲಗ್ಗೆ ಇಟ್ಟಿರುವ ಈ ಛಲಗಾತಿಗೆ ಬೆಳ್ಳಿ ಪದಕವಂತೂ ಕನ್ಫರ್ಮ್‌ ಆಗಿದೆ. ಬಟ್‌ ಚಿನ್ನ ಗೆದ್ದೇ ಬರುತ್ತಾರೆ ಎಂಬ ಕಾನ್ಫಿಡೆಂಟ್‌ ಇಡೀ ದೇಶದ ಕ್ರೀಡಾಭಿಮಾನಿಗಳಲ್ಲಿದೆ.

ಒಲಿಂಪಿಕ್ಸ್‌ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಕೂಡ. ಪ್ರಿಕ್ವಾರ್ಟರ್‌ ಫೈನಲ್‌ನಲ್ಲಿ ಫೋಗಟ್‌ ನಾಲ್ಕು ಬಾರಿಯ ವಿಶ್ವ ಚಾಂಪಿಯನ್‌, ಒಲಿಂಪಿಕ್ಸ್‌ ಹಾಲಿ ಗೋಲ್ಡ್‌ ಮೆಡಾಲಿಸ್ಟ್‌, ಸೋಲೇ ಕಾಣದ ಜಪಾನ್‌ನ ಯೂಯಿ ಸುಸಾಕಿ ಅವರನ್ನು ಮಣಿಸಿದಾಗಲೇ ಇಡೀ ಭಾರತ ಚಿನ್ನ ಗೆದ್ದಷ್ಟೇ ಸಂಭ್ರಮಿಸಿತ್ತು. ಬಳಿಕ ಕ್ವಾರ್ಟರ್‌ ಫೈನಲ್‌ನಲ್ಲಿ 7-5 ಪಾಯಿಂಟ್‌ಗಳಿಂದ ಉಕ್ರೇನ್‌ನ ಒಕ್ಸಾನಾ ಲಿವಾಚ್‌ ಅವರ ಮಗ್ಗಲು ಮುರಿದು, ಸೆಮಿಫೈನಲ್‌ನಲ್ಲಿ ಕ್ಯೂಬಾದ ಯೂಸ್ನೆಲಿಸ್ ಗುಜ್ಮನ್‌ ಲೊಪೆಜ್‌ ಎದುರು ವಿನೇಶ್‌ ಫೋಗಟ್‌ 5-0 ಪಾಯಿಂಟ್‌ಗಳಿಂದ ಗೆದ್ದು ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಇದನ್ನೂ ಓದಿ: ಯಡಿಯೂರಪ್ಪನಿಗೆ ಈ ವಯಸ್ಸಿನಲ್ಲಿ ಇದು ಬೇಕಿತ್ತಾ: ಸಿಎಂ ಸಿದ್ದರಾಮಯ್ಯ

ಹರಿಯಾಣದ ವಿನೇಶ್‌ ಫೋಗಟ್‌ ಕಾಮನ್‌ವೆಲ್ತ್‌ ಹಾಗೂ ಏಷ್ಯನ್‌ ಕ್ರೀಡಾಕೂಟದಲ್ಲಿ ಗೆದ್ದ ಮೊದಲ ಮಹಿಳಾ ಕುಸ್ತಿಪಟು. ಫೋಗಟ್‌ ಇಡೀ ಕುಟುಂಬವೇ ಕುಸ್ತಿ ಹಿನ್ನೆಲೆ ಹೊಂದಿದೆ. ಗೀತಾ ಫೋಗಟ್‌, ಬಬಿತಾ ಕುಮಾರಿ ಫೋಗಟ್‌ ಅವರ ಸಂಬಂಧಿಗಳು. ಫೋಗಟ್‌ ಮದುವೆಯಾಗಿರುವ ಸೋಮ್‌ವೀರ್‌ ರಥಿ ಕೂಡ ಕುಸ್ತಿಪಟು. ಅಮೀರ್‌ ಖಾನ್‌ ನಟನೆಯ ದಂಗಲ್‌ ಸಿನಿಮಾವು ವಿನೇಶ್‌ ಫೋಗಟ್‌ ದೊಡ್ಡಪ್ಪ ಮಹಾವೀರ್‌ ಸಿಂಗ್‌ ಫೋಗಟ್‌ ಹಾಗೂ ಅವರ ಮಕ್ಕಳಾದ ಗೀತಾ, ಬಬಿತಾ ಅವರಿಗೆ ಸಂಬಂಧಿಸಿದ ಕಥೆಯಾಗಿದೆ.

2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಗಾಯಗೊಂಡಿದ್ದ ವಿನೇಶ್‌ ಫೋಗಟ್‌ ಮತ್ತೆ ಕಣಕ್ಕಿಳಿದಿದ್ದೇ ರಣರೋಚಕ. ಟೋಕಿಯೊ ಒಲಿಂಪಿಕ್ಸ್‌ ಬಳಿಕ ಒಮ್ಮೆ ಅಮಾನತು ಶಿಕ್ಷೆಗೂ ಒಳಗಾಗಿದ್ದರು. ಕಂಪನಿಯೊಂದಿಗಿನ ಒಪ್ಪಂದವೂ ಕಳಚಿ ಬಿದ್ದಿತ್ತು.

ಇದನ್ನೂ ಓದಿ: ಸಚಿನ್​ ​ಬಾಲ್ಯ ಸ್ನೇಹಿತ ಕಾಂಬ್ಳಿಗೆ ಇದೆಂಥಾ ದುಸ್ಥಿತಿ..? ಹೇಗಿದ್ದಾರೆ ಗೊತ್ತಾ?

ಇನ್ನು ದೌರ್ಜನ್ಯ ಎಸಗುತ್ತಿದ್ದಾರೆಂದು ಭಾರತೀಯ ಕುಸ್ತಿ ಫೆಡರೇಷನ್‌, ಅದರ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಹಾಗೂ ಕೋಚ್‌ಗಳ ವಿರುದ್ಧ ಬೀದಿಗಿಳಿದು ನಡೆಸಿದ ಪ್ರತಿಭಟನೆ ಎಲ್ಲರಿಗೂ ಗೊತ್ತೇ ಇದೆ. ಪೊಲೀಸರು ಅವರನ್ನು ವಶಕ್ಕೂ ಪಡೆದಿದ್ದರು. ಬೀದಿಯಲ್ಲಿ ಕಣ್ಣೀರಿಡುತ್ತಾ ಕುಳಿತಿದ್ದ ಆ ಘಟನೆ ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಒಲಿಂಪಿಕ್ಸ್‌ ಅರ್ಹತಾ ಸುತ್ತಿನ ಸ್ಪರ್ಧೆಗಳಿಗೆ ಆಕೆಯನ್ನು ಕಳುಹಿಸದಂತೆ ತಡೆಯುವ ಹುನ್ನಾರ ನಡೆದ ಆರೋಪವೂ ಇದೆ. ಈಗ ಎಲ್ಲಾ ಸೇಡನ್ನು ಒಟ್ಟಿಗೆ ತೀರಿಸಿಕೊಳ್ಳುವಷ್ಟರ ಮಟ್ಟಿಗೆ ಸವಾಲುಗಳನ್ನು ಮೆಟ್ಟಿ ನಿಂತು ಅಂಗಳದಲ್ಲಿ ತಮ್ಮ ಸಾಮರ್ಥ್ಯ ತೋರುತ್ತಿದ್ದಾರೆ.

ಸದ್ಯ 29 ವರ್ಷದ ವಿನೇಶ್‌ ಫೋಗಟ್‌ ಖಂಡಿತ ಚಿನ್ನ ಗೆದ್ದು ಬರುತ್ತಾರೆ. ಇವತ್ತೇ ಚಿನ್ನದ ಪದಕ್ಕಾಗಿ ಹೋರಾಟ. ಗೆಲ್ಲದಿದ್ದರೂ ಅವರು ಭಾರತದ ಪಾಲಿಗೆ ಚಿನ್ನವೇ ಆಗಿದ್ದಾರೆ.

RELATED ARTICLES

Related Articles

TRENDING ARTICLES