Friday, September 20, 2024

69ನೇ ಫಿಲ್ಮ್ ಫೇರ್ ಅವಾರ್ಡ್​ : ಅತ್ಯುತ್ತಮ ನಟ ರಕ್ಷಿತ್ ಶೆಟ್ಟಿ!

ಫಿಲ್ಮ್ ಫೇರ್ ಅವಾರ್ಡ್ಸ್ ಅಂದ್ರೆ ಭಾರತೀಯ ಫಿಲ್ಮ್ ಮೇಕರ್ಸ್​ ಪಾಲಿಗೆ ಆಸ್ಕರ್ ಇದ್ದಂತೆ. ಬಾಲಿವುಡ್ & ಸೌತ್ ಇಂಡಸ್ಟ್ರಿಯ ಸಾಧಕರಿಗೆ ನೀಡುವ ಈ ಪ್ರಶಸ್ತಿ ಚಿತ್ರಕರ್ಮಿಗಳಿಗೆ ಮತ್ತಷ್ಟು ಉತ್ಸಾಹ ತಂದುಕೊಡುತ್ತೆ. ಸದ್ಯ ಹೈದ್ರಾಬಾದ್​​ನಲ್ಲಿ 69ನೇ ಫಿಲ್ಮ್​​ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆದಿದ್ದು ಸೌತ್ ಸಿನಿಲೋಕದ 2023ರ ಸಾಧಕರು ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಹಾಗಾದ್ರೆ ಯಾವೆಲ್ಲಾ ತಾರೆಯರು ಪ್ರಶಸ್ತಿ ಪಡೆದುಕೊಂಡ್ರು. ಯಾವೆಲ್ಲಾ ಚಿತ್ರಗಳು ಅವಾರ್ಡ್ಸ್ ಪಡೆದುಕೊಂಡ್ವು ಇಲ್ಲಿದೆ ಸಂಪೂರ್ಣ ಮಾಹಿತಿ.

ಯೆಸ್, 69ನೇ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ಹೈದ್ರಾಬಾದ್​​ನಲ್ಲಿ ವರ್ಣರಂಜಿತ ವೇದಿಕೆ ಮೇಲೆ ನಡೆದಿದೆ. 2023ರಲ್ಲಿ ತೆರೆಕಂಡ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಿಗೆ ಪ್ರಶಸ್ತಿ ನೀಡಲಾಗಿದೆ. ಸೌತ್​ನ ಎಲ್ಲಾ ಭಾಷೆಯ ಚಿತ್ರರಂಗಗಳ ದಿಗ್ಗಜರು ಫಿಲ್ಮ್​​ ಫೇರ್​​ ಪ್ರಶಸ್ತಿ ಸಮಾರಂಭದಲ್ಲಿ ಹಾಜರಿದ್ದು ವೇದಿಕೆಯ ರಂಗು ಹೆಚ್ಚಿಸಿದ್ರು.

ಪ್ರಣಯರಾಜ ಶ್ರೀನಾಥ್​​ಗೆ ಈ ಬಾರಿ ಫಿಲ್ಮ್​ ಫೇರ್ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ. ಕನ್ನಡ ಚಿತ್ರರಂಗದಲ್ಲಿ 5 ದಶಕಕ್ಕೂ ಅಧಿಕ ಕಾಲ ಸೇವೆ ಸಲ್ಲಿಸಿರೋ ಶ್ರೀನಾಥ್​ಗೆ ಲೈಫ್​ ಟೈಂ ಅಚೀವ್​ಮೆಂಟ್ ಅವಾರ್ಡ್ ನೀಡಲಾಗಿದೆ. ಅವರ ಕಲಾಸೇವೆಗೆ ತಕ್ಕ ಗೌರವ ದೊರಕಿದೆ.

ಇದನ್ನೂ ಓದಿ: ಭೀಮನ ಅಮವಾಸ್ಯೆ ಬಂದ್ರೆ ಕಾಡುವ ಕಹಿ ನೆನಪು: ಆ ಕರಾಳ ರಾತ್ರಿ ನಡೆದಿತ್ತು ಡಾ.ರಾಜ್ ಅಪಹರಣ

ಇನ್ನೂ ಈ ಸಾರಿ ಅತ್ಯುತ್ತಮ ನಟ ಫಿಲ್ಮ್ ಫೇರ್ ಪ್ರಶಸ್ತಿ ಮುಡಿಗೇರಿಸಿಕೊಂಡಿರೋದು ರಕ್ಷಿತ್ ಶೆಟ್ಟಿ. ಸಪ್ತಸಾಗರದಾಚೆ ಎಲ್ಲೋ ಸಿನಿಮಾದ ನಟನೆಗೆ ಅವರಿಗೆ ಬೆಸ್ಟ್ ಆ್ಯಕ್ಟರ್ ಅವಾರ್ಡ್ ಬಂದಿದೆ. ಎರಡು ಭಾಗಗಳ ಈ ಸಿನಿಮಾಗಾಗಿ ಅತೀವ ಶ್ರಮ ಪಟ್ಟಿದ್ದ ರಕ್ಷಿತ್​​ಗೆ ಈ ಪ್ರಶಸ್ತಿ ಶ್ರಮಕ್ಕೆ ತಕ್ಕ ಪ್ರತಿಫಲದಂತೆ ಒಲಿದು ಬಂದಿದೆ.

ಇನ್ನೂ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ನಟನೆಗೆ ಸಿರಿ ರವಿಕುಮಾರ್ ಬೆಸ್ಟ್ ಆ್ಯಕ್ಟ್ರೆಸ್ ಫಿಲ್ಮ್ ಫೇರ್ ಅವಾರ್ಡ್ ಗಿಟ್ಟಿಸಿಕೊಂಡಿದ್ದಾರೆ. ರಾಜ್ ಶೆಟ್ಟಿ ನಟನೆ ನಿರ್ದೇಶನದ ಈ ಸಿನಿಮಾದಲ್ಲಿ ಸಿರಿ ಸೊಗಸಾಗಿ ನಟಿಸಿದ್ರು. ಅವರ ನಟನೆಗೆ ಮೊದಲ ಫಿಲ್ಮ್ ಫೇರ್ ಪ್ರಶಸ್ತಿ ಒಲಿದುಬಂದಿದೆ.

ಇನ್ನೂ ಈ ಬಾರಿ ಕನ್ನಡದ ಅತ್ಯುತ್ತುಮ ಚಿತ್ರ ಪ್ರಶಸ್ತಿ ಗಳಿಸಿರೋದು ಡೇರ್ ಡೆವಿಲ್ ಮುಸ್ತಫಾ. ಪೂರ್ಣಚಂದ್ರ ತೇಜಸ್ವಿಯವರ ಕಥೆ ಆದರಿಸಿ ಮಾಡಿದ ಈ ಸಿನಿಮಾಗೆ ಬೆಸ್ಟ್ ಫಿಲ್ಮ್ ಅವಾರ್ಡ್ ಒಲಿದಿದೆ.

ಟಗರುಪಲ್ಯ ಚಿತ್ರದ ನಟನೆಗೆ ರಂಗಾಯಣ ರಘು ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಪಡೆದ್ರೆ, ಸುಧಾ ಬೆಳವಾಡಿಯವರಿಗೆ ಕೌಸಲ್ಯಾ ಸುಪ್ರಜಾ ರಾಮ ಚಿತ್ರದ ನಟನೆಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಬಂದಿದೆ.

ಚರಣ್​ ರಾಜ್ ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದ್ರೆ ಕಪೀಲ್ ಕಪಿಲನ್, ಶ್ರೀಲಕ್ಷ್ಮೀ ಬೆಲವೆಣ್ಣು ಅತ್ಯುತ್ತಮ ಗಾಯಕ ಮತ್ತು ಗಾಯಕಿ ಪ್ರಶಸ್ತಿ ಪಡೆದಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರದ ನಿರ್ದೇಶನಕ್ಕೆ ಹೇಮಂತ್ ರಾವ್ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಗಳಿಸಿಕೊಂಡಿದ್ದಾರೆ. ಅತಿ ಹೆಚ್ಚು ವಿಭಾಗಗಳಲ್ಲಿ ಸಪ್ತಸಾಗರದಾಚೆ ಎಲ್ಲೋ ಸಿನಿಮಾ ಪ್ರಶಸ್ತಿ ಗಳಿಸಿದೆ.

ಇದನ್ನೂ ಓದಿ: ಕೇರಳ ಭೂಕುಸಿತ: ರಶ್ಮಿಕಾ ಮಂದಣ್ಣ ಸೇರಿ ಸಿನಿತಾರೆಯರಿಂದ ಆರ್ಥಿಕ ನೆರವು

ತೆಲುಗಿನಲ್ಲಿ ನಾನಿ ಮತ್ತು ಕೀರ್ತಿ ಸುರೇಶ್ ದಸರಾ ಸಿನಿಮಾದ ನಟನೆಗೆ ಅತ್ಯುತ್ತಮ ನಟ & ನಟಿ ಪ್ರಶಸ್ತಿಯನ್ನ ಪಡೆದುಕೊಂಡಿದ್ದಾರೆ,. ತಮಿಳಿನಲ್ಲಿ ಪೊನ್ನಿಯನ್ ಸೆಲ್ವನ್ ಚಿತ್ರದ ನಟನೆಗೆ ಚಿಯಾನ್ ವಿಕ್ರಮ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಶನಿವಾರ ಹೈದ್ರಾಬಾದ್​​ನಲ್ಲಿ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ವರ್ಣರಂಜಿತವಾಗಿ ನಡೆದಿದ್ದು, ಸೌತ್ ಸಿನಿಲೋಕದ ದಿಗ್ಗಜರ ಸಮಾಗಮಕ್ಕೆ ಸಾಕ್ಷಿಯಾಗಿದೆ. ಹಿರಿಯ ಕಲಾವಿದ ಬ್ರಹ್ಮಾನಂದಂ, ಪ್ರಕಾಶ್ ರೈ, ಪ್ರಿಯಾಮಣಿ, ಅಲ್ಲು ಅರವಿಂದ್,  ಕನ್ನಡ ನಿರ್ಮಾಪಕ ಸಂಜಯ್ ಗೌಡ ಸೇರಿದಂತೆ ಹಲವರು ಪ್ರಶಸ್ತಿ ಪ್ರಧಾನ ವೇದಿಕೆಯಲ್ಲಿದ್ರು. ಮುತ್ತಿನ ನಗರಿಯಲ್ಲಿ ನಡೆದ ಫಿಲ್ಮ್ ಫೇರ್ ಪ್ರಶಸ್ತಿ ಪ್ರಧಾನ ಸಮಾರಂಭ ಸೌತ್ ಸಿನಿಲೋಕಕ್ಕೆ ಮೆರಗು ತಂದಿದೆ.

ಅಮೀತ್, ಫಿಲ್ಮ್ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES