ಬೆಂಗಳೂರು: ನನ್ನ ರಾಜಕೀಯ ಜೀವನ ತೆರೆದ ಪುಸಕ ಪ್ರತಿ ಪುಟಗಳು ಪಾದರ್ಶಕ ಮತ್ತು ಪ್ರಾಮಾಣಿಕ ಸಣ್ಣದೊಂದು ಕಪ್ಪು ಚುಕ್ಕೆ ಇಲ್ಲದಂತೆ ರಾಜಕೀಯದ ಪಾವಿತ್ರ್ಯತೆ ಕಾಪಾಡಿಕೊಂಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಅಧಿವೇಶನದಲ್ಲಿ ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಆಡಳಿತ ಪಕ್ಷದವರು ಬೆಳಕು ಚೆಲ್ಲಿ ಚರ್ಚಿಸಿದರೂ ವಿರೋಧ ಪಕ್ಷದವರು ನೆಪಕ್ಕೂ ರಾಜ್ಯದ ಜನರ ಸಂಕಷ್ಟಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಅಧಿವೇಶನದಲ್ಲಿ ವಿರೋಧ ಪಕ್ಷಗಳ ಹೊಣೆಗೇಡಿತನ ಎಂದು ವಿರೋಧ ಪಕ್ಷಗಳ ವಿರುದ್ದ ಕಿಡಿಕಾರಿದರು.
ಬಿಜೆಪಿ, ಜೆಡಿಎಸ್ ಹತಾಶರಾಗಿದ್ದಾರೆ. ನಾವು 135 ಸ್ಥಾನ ಗೆದ್ದ ಬಳಿಕ ರಾಜಕೀಯ ಪ್ರೇರಿತವಾದ ಹೇಳಿಕೆಗಳನ್ನು ಕೊಡ್ತಾರೆ. ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಯತ್ನಿಸುತ್ತಿದ್ದಾರೆ. ಎರಡನೇ ಬಾರಿ ಸಿಎಂ ಆಗಿರುವುದು ಅವರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಎರಡು ವಾರವೂ ವಾಲ್ಮೀಕಿ ನಿಗಮದ ಒಂದೇ ವಿಚಾರ ಪ್ರಸ್ತಾಪ ಆಗಿದೆ. ರಾಜ್ಯದ ಜನರ ಸಮಸ್ಯೆಗಳ ಬಗ್ಗೆ ಚಕಾರವನ್ನೇ ಎತ್ತಲಿಲ್ಲ. ಆಡಳಿತ ಪಕ್ಷದ ಶಾಸಕರು ರಾಜ್ಯದ ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಿ ಚರ್ಚೆ ನಡೆಸಿದರು.
ಇದನ್ನೂ ಓದಿ: ದರ್ಶನ್ಗಾಗಿ ಕೊಲ್ಲೂರು ಮೂಕಾಂಬಿಕ ದೇವಾಲಯದಲ್ಲಿ ಪತ್ನಿಯಿಂದ ಹೋಮ
ಇದನ್ನೆಲ್ಲಾ ನೋಡಿದಾಗ ಮುಖ್ಯಮಂತ್ರಿಗಳ ವ್ಯಕ್ತಿತ್ವಕ್ಕೆ ಮಸಿ ಬಳಿಯಲು ಅಧಿವೇಶನವನ್ನು ದುರುಪಯೋಗ ಪಡಿಸಿಕೊಳ್ಳುವುದು ಬಿಟ್ಟರೆ ಬೇರೆ ಜನಪರವಾದ ಉದ್ದೇಶ ವಿರೋಧ ಪಕ್ಷಗಳಿಗೆ ಇರಲಿಲ್ಲ ಎನ್ನುವುದು ಸ್ಪಷ್ಟವಾಗಿದೆ. ನಾನು ಮಂತ್ರಿಯಾಗಿ 40 ವರ್ಷ ಆಯ್ತು. ಇವತ್ತಿನವರೆಗೆ ನನ್ನ ಮೇಲೆ ಸಣ್ಣ ಕಪ್ಪುಚುಕ್ಕೆ ಇಲ್ಲ. ನನ್ನ ರಾಜಕೀಯ ಜೀವನ ತೆರೆದ ಪುಸ್ತಕ ಎಂದರು.
ಜನರ ವಿಶ್ವಾಸ ಕಳೆದುಕೊಂಡಿರುವ ಬಿಜೆಪಿ ಮತ್ತು ಜೆಡಿಎಸ್ ಲೋಕಸಭಾ ಚುನಾವಣೆಯಲ್ಲೂ ಹಿಂದಿನ ಬಾರಿಗಿಂತ ಹೆಚ್ಚು ಸೀಟು, ಮತ ಗಳಿಸಲು ಸಾದ್ಯವಾಗಲಿಲ್ಲ. ನಮಗೆ ಕಳೆದ ಲೋಕಸಭಾ ಚುನಾವಣೆಗಿಂತ ಶೇ13 ರಷ್ಟು ಮತಗಳನ್ನು ಈ ಚುನಾವಣೆಯಲ್ಲಿ ಹೆಚ್ಚು ಗಳಿಸಿದೆವು. ಇದರಿಂದ ಹತಾಶರಾಗಿ ಮತ್ತೆ ಜನರ ವಿಶ್ವಾಸ ಗಳಿಸಲು ತಪ್ಪು ದಾರಿಯಲ್ಲಿ ವಾಮ ಮಾರ್ಗ ಹಿಡಿದಿದ್ದಾರೆ ಎಂದು ವಿಪಕ್ಷಗಳ ವಿರುದ್ದ ವಾಗ್ದಾಳಿ ನಡೆಸಿದರು.