Friday, September 20, 2024

ಮಾರ್ಟಿನ್​ಗೆ​ 2.5ಕೋಟಿ ಗೋಲ್​ಮಾಲ್..?:100 ಕೋಟಿ ಬಜೆಟ್​​ನ ಬಿಗ್ ಸಿನಿಮಾಗೆ ನೂರೆಂಟು ವಿಘ್ನ

ಫಿಲ್ಮಿಡೆಸ್ಕ್​: ಸ್ಯಾಂಡಲ್​ವುಡ್​​ನಿಂದ ಪ್ಯಾನ್ ಇಂಡಿಯಾ ಸದ್ದು ಮಾಡೋದಕ್ಕೆ ಸಜ್ಜಾಗಿರೋ ಮಾರ್ಟಿನ್ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಮನೆ ಮಾಡಿದೆ. ಆದ್ರೆ ಇಷ್ಟೆಲ್ಲಾ ನಿರೀಕ್ಷೆಗಳಿದ್ರೂ ಈ ಸಿನಿಮಾದ ರಿಲೀಸ್ ಮಾತ್ರ ತಡವಾಗ್ತಾನೇ ಬಂತು. ಅಷ್ಟಕ್ಕೂ ಧ್ರುವ ಸರ್ಜಾ ನಟನೆಯ ಮಾರ್ಟಿನ್ ಇಷ್ಟೊಂದು ತಡವಾಗೋದಕ್ಕೆ ಏನ್ ಕಾರಣ ಅಂತ ಹುಡುಕಹೋದ್ರೆ ಅನೇಕ ರೋಚಕ ಕಥೆಗಳು ತೆರೆದುಕೊಳ್ತಾ ಇವೆ. ಅದ್ರಲ್ಲೂ VFX ಸ್ಟುಡಿಯೊವೊಂದು ಮಾರ್ಟಿನ್ ತಂಡಕ್ಕೆ ಮೋಸ ಮಾಡಿದ್ದು ಬರೊಬ್ಬರಿ 2.5 ಕೋಟಿ ಹಣವನ್ನ ವಂಚಿಸಿದೆ.

ಯೆಸ್, ಸ್ಯಾಂಡಲ್​ವುಡ್​​ನ ಈ ವರ್ಷದ ಬಹುನಿರೀಕ್ಷೆಯ ಪ್ಯಾನ್ ಇಂಡಿಯಾ ಸಿನಿಮಾಗಳ ಪೈಕಿ ಮಾರ್ಟಿನ್ ಸಿನಿಮಾ ಮುಂಚೂಣಿಯಲ್ಲಿದೆ. ಧ್ರುವ ಸರ್ಜಾ ನಟನೆಯ ಈ ಸಿನಿಮಾ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಬರೊಬ್ಬರಿ 100 ಕೋಟಿ ವೆಚ್ಚದಲ್ಲಿ ಮಾರ್ಟಿನ್ ರೆಡಿಯಾಗಿದೆ ಅಂತ ಹೇಳಲಾಗ್ತಾ ಇದೆ.

ಆದ್ರೆ ಈ ನೂರು ಕೋಟಿಯ ಸಿನಿಮಾಗೆ ನೂರೆಂಟು ವಿಘ್ನಗಳು ಒದಗಿಬಂದಿದ್ದು ಸುಳ್ಳಲ್ಲ.  ಮೊದಲು ನಿರ್ದೇಶಕ ನಂದಕಿಶೋರ್ ಮತ್ತು ಧ್ರುವ ಕಾಂಬೋನಲ್ಲಿ ಸಿನಿಮಾ ಮಾಡೋದಕ್ಕೆ ಹೊರಟಿದ್ದ ಉದಯ್ ಮೆಹತಾ ಬಳಿಕ ನಿರ್ದೇಶಕನ ಜಾಗಕ್ಕೆ ಎ.ಪಿ ಅರ್ಜುನ್​ನ ತಂದು ಕೂರಿಸಿದ್ರು. ಯಾರೂ ಮಾಡದಂಥಾ ಸಿನಿಮಾ ಮಾಡ್ತೀನಿ ಅಂತ ಹೊರಟ ಅರ್ಜುನ್ ಬರೊಬ್ಬರಿ 200ಕ್ಕೂ ಅಧಿಕ ದಿನ ಶೂಟ್ ಮಾಡಿದ್ರು.

ನಿರ್ಮಾಪಕ ಉದಯ್ ಮೆಹತಾ ಸಿನಿಮಾಗೆ ಕೇಳಿದ್ದನ್ನೆಲ್ಲಾ ಕೊಟ್ರು. ನಟ ಧ್ರುವ ಕೇಳಿದಷ್ಟು ದಿನಗಳ ಕಾಲ ಡೇಟ್ ಕೊಟ್ರು. ಆದ್ರೆ ಸಿನಿಮಾಗೆ ಹಂತಹಂತದಲ್ಲೂ ಅನೇಕರು ವಂಚನೆ ಮಾಡಿದ್ರು. ಇದೀಗ VFX ವಿಚಾರದಲ್ಲೂ ಮಾರ್ಟಿನ್ ಟೀಮ್​ಗೆ ಧೋಖಾ ಮಾಡಲಾಗಿದೆ ಅನ್ನೋ ಸಂಗತಿ ಹೊರಬಂದಿದೆ.

ನಿರ್ದೇಶಕರ ಸೂಚನೆ ಮೇರೆಗೆ ಈ ಚಿತ್ರದ ವಿಎಫ್ಎಕ್ಸ್​ ಕೆಲಸಗಳನ್ನ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ಅನ್ನೋ ಸಂಸ್ಥೆಗೆ ವಹಿಸಲಾಗಿತ್ತು. ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ವಿಎಫ್ಎಕ್ಸ್ ವರ್ಕ್ ಇರೋದ್ರಿಂದ ಕೋಟ್ಯಂತರ ರೂಪಾಯಿಗೆ ಚಿತ್ರದ ಕೆಲಸಗಳನ್ನ ಮಾಡಿಕೊಡುವ ಅಗ್ರೀಮೆಂಟ್ ಮಾಡಲಾಗಿತ್ತು.

ಇದನ್ನೂ ಓದಿ: 14 ದಿನಗಳ ಕಾಲ ದರ್ಶನ್​ ಬಂಧನ ವಿಸ್ತರಣೆ: ಕೋರ್ಟ್​ ಆದೇಶ

ನಿರ್ಮಾಪಕ ಉದಯ್ ಮೆಹತಾ ಹಂತ ಹಂತದಲ್ಲಿ ಸಿನಿಮಾ ಬರೊಬ್ಬರಿ 2.5 ಕೋಟಿ ರೂಪಾಯಿ ಕೊಟ್ಟಿದ್ದಾರೆ. ಎಲ್ಲ ಹಣದ ವ್ಯವಹಾರಕ್ಕೂ ಅವರ ಬಳಿ ದಾಖಲೆಗಳಿವೆ. ಆದ್ರೆ ಇಷ್ಟೆಲ್ಲಾ ಹಣ ಪಡೆದ ವಿಎಫ್​ಎಕ್ಸ್ ಕಂಪನಿ ಗ್ರಾಫಿಕ್ಸ್ ಕೆಲಸಗಳನ್ನ ಮಾಡದೇ ವಂಚನೆ ಮಾಡಿದೆ. ಈ ಬಗ್ಗೆ ಫಿಲ್ಮಿ ಪವರ್ ಜೊತೆ ನಿರ್ಮಾಪಕ ಉದಯ್ ಮೆಹತಾ ಹಂಚಿಕೊಂಡಿದ್ದಾರೆ.

ಹೌದು, ಎರಡೂವರೆ ಕೋಟಿ ರೂಪಾಯಿ ಮೋಸ ಮಾಡಿದ ಸತ್ಯ ರೆಡ್ಡಿ & ಸುನಿಲ್ ವಿರುದ್ದ ಬೆಂಗಳೂರಿನ ಬಸವೇಶ್ಚವರ ನಗರ ಠಾಣೆಯಲ್ಲಿ  FIR ದಾಖಲಾಗಿದೆ. ನಾಪತ್ತೆಯಾಗಿದ್ದ  ವಂಚಕ ಸತ್ಯರೆಡ್ಡಿಯನ್ನ ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗಿದೆ.

ಇವರ ದೆಸೆಯಿಂದ ನಿರ್ಮಾಪಕರಿಗೆ 2.5 ಕೋಟಿ ಲಾಸ್ ಆಗಿದ್ದಷ್ಟೇ ಅಲ್ಲದೇ ಸಿನಿಮಾ 6 ತಿಂಗಳಿಗೂ ಹೆಚ್ಚು ಕಾಲ ತಡವಾಗಿದೆ. ಕೊನೆಗೂ ಬೇರೊಂದು ಕಂಪನಿಯಿಂದ  VFX & CG ವರ್ಕ್ ಮಾಡಿಸಿರೋ ಉದಯ್ ಮೆಹತಾ ಸಿನಿಮಾವನ್ನ ರೆಡಿಮಾಡಿದ್ದಾರೆ. ಇದೇ  ಅಕ್ಟೋಬರ್ 11ಕ್ಕೆ ವರ್ಲ್ಡ್ ವೈಡ್ ಚಿತ್ರವನ್ನ ತೆರೆಗೆ ತರೋದಕ್ಕೆ ಸಜ್ಜಾಗಿದ್ದಾರೆ.

ಒಟ್ಟಾರೆ ನೂರು ಕೋಟಿಯ ಸಿನಿಮಾಗೆ ನೂರೆಂಟು ವಿಘ್ನ ಅನ್ನುವಂತೆ ಮಾರ್ಟಿನ್​ ತಂಡಕ್ಕೆ ನಾನಾ ತೊಂದರೆ ಎದುರಾಗಿವೆ. ಈ ಎಲ್ಲಾ ತೊಂದರೆಗಳನ್ನ ಬಗೆಹರಿಸಿಕೊಂಡು ತೆರೆಗೆ ಬರ್ತಿರೋ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲುವು ದಾಖಲಿಸಿ ನಿರ್ಮಾಪಕರ ಕೈ ಹಿಡಿಯಬೇಕಿದೆ.

ಅಮೀತ್, ಫಿಲ್ಮ್ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES