Thursday, September 19, 2024

ಪುಟ್ಟಣ್ಣ ಪರಿಚಯಿಸಿದ ತಾರೆ ಅಪರ್ಣಾ..‘ಮಸಣ’ ಸೇರಿದ ‘ಹೂವು’

ಫಿಲ್ಮಿಡೆಸ್ಕ್​: ಅಪರ್ಣಾ ನಿರೂಪಕಿಯಾಗೇ ಕನ್ನಡಿಗರಿಗೆ ಹೆಚ್ಚು ಪರಿಚಯ. ಆದ್ರೆ ಅಪರ್ಣಾ ಒಬ್ಬ ಅದ್ಭುತ ನಟಿ ಕೂಡ ಅನ್ನೋದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಅದ್ರಲ್ಲೂ ಅಪರ್ಣಾ ಚಿತ್ರರಂಗಕ್ಕೆ ಕಾಲಿಟ್ಟಾಗ ಆಕೆ ದೊಡ್ಡ ಸ್ಟಾರ್ ನಟಿಯಾಗ್ತಾಳೆ ಅಂತಲೇ ಎಲ್ಲರೂ ನಿರೀಕ್ಷೆ ಮಾಡಿದ್ರು. ಯಾಕಂದ್ರೆ ಅಪರ್ಣಾನ ಚಿತ್ರರಂಗಕ್ಕೆ ಪರಿಚಯ  ಮಾಡಿಸಿದ್ದು ಚಿತ್ರಬ್ರಹ್ಮ ಪುಟ್ಟಣ್ಣ ಕಣಗಾಲ್.

1985ರಲ್ಲಿ ತೆರೆಗೆ ಬಂದ ಪುಟ್ಟಣ್ಣ ಕಣಗಾಲ್​​ ನಿರ್ದೇಶನದ ಮಸಣದ ಹೂ ಚಿತ್ರದಲ್ಲಿ ನಾಯಕಿಯಾಗುವ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು ಅಪರ್ಣಾ. ಅಪರ್ಣಾಳ ತಂದೆ ನಾರಾಯಣಸ್ವಾಮಿ ಸಿನಿಮಾ ಪತ್ರಕರ್ತರಾಗಿದ್ದವರು. ಎಲ್ಲಕ್ಕಿಂತ ಹೆಚ್ಚಾಗಿ ಪುಟ್ಟಣ್ಣ ಕಣಗಾಲ್​ರ ಆತ್ಮೀಯ ಸ್ನೇಹಿತರು. ಸ್ನೇಹಿತನ ಮಗಳನ್ನ ನಾಯಕಿಯಾಗಿ ಪರಿಚಯಿಸಿದ ಪುಟ್ಟಣ್ಣ ಈಕೆಯನ್ನ ಸ್ಟಾರ್ ಆಗಿ ಮೆರೆಸ್ತಿನಿ ಅಂತ ಮಾತುಕೊಟ್ಟಿದ್ರಂತೆ. ಕಲ್ಪನಾ, ಆರತಿ, ಪದ್ಮಾ ವಾಸಂತಿಯಂಥಾ ನಟಿಯರಿಗೆ ಬ್ರೇಕ್ ಕೊಟ್ಟಿದ್ದ ಪುಟ್ಟಣ್ಣನ ಆಶಿರ್ವಾದ ಅಪರ್ಣಾಗೆ ದಕ್ಕಿತ್ತು. ಮಸಣದ ಹೂ ಬಳಿಕ ತಮ್ಮ ಮುಂದಿನ ಚಿತ್ರಗಳಲ್ಲೂ ಅಪರ್ಣಾಗೆ ಅವಕಾಶ ಕೊಡೋದಕ್ಕೆ ಪುಟ್ಟಣ್ಣ ನಿರ್ಧರಿಸಿದ್ರು. ಆದ್ರೆ ಪುಟ್ಟಣ್ಣ ಹೃದಯಾಘಾತದಿಂದ ಅಕಾಲಿಕ ಮರಣವನ್ನ ಹೊಂದಿದ್ರು. ಮಸಣದ ಹೂ ಚಿತ್ರವೇ ಅವರ ಕೊನೆಯ ಚಿತ್ರವಾಯ್ತು.

ಇದನ್ನೂ ಓದಿ: ನಿರೂಪಕಿ ಅಪರ್ಣಾ ವಸ್ತಾರೆ ಕ್ಯಾನ್ಸರ್​ನಿಂದ ನಿಧನ!

ಮಸಣದ ಹೂ ನಂತರ ಅಪರ್ಣಾ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ರು. ನಮ್ಮೂರ ರಾಜ, ಇನ್​​ಸ್ಪೆಕ್ಟರ್ ವಿಕ್ರಂ, ಡಾಕ್ಟರ್ ಕೃಷ್ಣ, ಒಂಟಿ ಸಲಗ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ಅಪರ್ಣಾ ನಟಿಸಿದ್ರು. ಡಾ.ವಿಷ್ಣುವರ್ಧನ್, ಅಂಬರೀಷ್, ಟೈಗರ್ ಪ್ರಭಾಕರ್, ಶಿವರಾಜ್​ಕುಮಾರ್ ಸೇರಿದಂತೆ ಕನ್ನಡದ ಸ್ಟಾರ್ ನಟರುಗಳ ಜೊತೆ ಸ್ಕ್ರೀನ್ ಶೇರ್ ಮಾಡಿದ್ರು.  ಆದ್ರೆ ಅಪರ್ಣಾ ಪ್ರತಿಭೆಗೆ ತಕ್ಕ ಪಾತ್ರಗಳು ಅವರಿಗೆ ಸಿಗಲಿಲ್ಲ. ಈ ನಡುವೆ ದೂರದರ್ಶನದ ನಿರೂಪಕಿಯಾಗಿ ಆಯ್ಕೆಯಾದ ಅಪರ್ಣಾ ನಿರೂಪಣಾ ಕ್ಷೇತ್ರದಲ್ಲೇ ಮುಂದುವರೆದ್ರು. ನಡು ನಡುವೆ ಕೆಲವು ಧಾರಾವಾಹಿಗಳಲ್ಲೂ ನಟಿಸಿದ್ರು. ಮೂಡಲಮನೆ, ಮುಕ್ತ ಧಾರಾವಾಹಿಗಳ ಪಾತ್ರಗಳ ಮೂಲಕ ತಮ್ಮ ನಟನಾ ಪ್ರತಿಭೆಯನ್ನ ತೋರಿದ್ರು. ಬಿಗ್ ಬಾಸ್​ ಮೊದಲ ಸೀಸನ್​ನಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ರು. ಮಜಾಭಾರತ ಹಾಸ್ಯ ಕಾರ್ಯಕ್ರಮದಲ್ಲಿ ವರಲಕ್ಷ್ಮೀಯಾಗಿ ಮಿಂಚಿದ್ರು.

ಸಾವಿರಾರು ಕಾರ್ಯಕ್ರಮಗಳ ನಿರೂಪಣೆ ಮಾಡಿದ್ದ ಅಪರ್ಣಾ ತನ್ನ ಸುಶ್ರಾವ್ಯ ಕಂಠ, ಸ್ಪಷ್ಟ ಕನ್ನಡದಿಂದ ಕನ್ನಡಿಗರ ಮನದಲ್ಲಿ ತನ್ನದೇ ಸ್ಥಾನ ಪಡೆದಿದ್ರು. 2011ರಲ್ಲಿ ಅಪರ್ಣಾ ಅವರು ಬೆಂಗಳೂರು ಮೆಟ್ರೋಗಾಗಿ ಪ್ರಯಾಣಿಕರ-ಬೋರ್ಡಿಂಗ್ ಮತ್ತು ಡಿಬೋರ್ಡಿಂಗ್ ರೆಕಾರ್ಡ್ ಮಾಡಿದ ಪ್ರಕಟಣೆಗಳಿಗೆ ತಮ್ಮ ಧ್ವನಿಯನ್ನು ನೀಡಿದರು. ಇವತ್ತಿಗೂ ನಮ್ಮ ಮೆಟ್ರೋನಲ್ಲಿ ಮಾರ್ಧನಿಸುವ ಧ್ವನಿ ಅಪರ್ಣಾ ಅವರದ್ದೇ.

ಬಹಳಷ್ಟು ವರ್ಷಗಳಿಂದ ಚಿತ್ರರಂಗದಿಂದ ದೂರವಿದ್ದ ಅಪರ್ಣಾ ಇತ್ತೀಚಿಗೆ ಗ್ರೇ ಗೇಮ್ಸ್ ಅನ್ನೋ ಸಿನಿಮಾದಲ್ಲಿ ನಟಿಸಿದ್ರು. ಇದೇ ಅಪರ್ಣಾ ಕೊನೆ ಚಿತ್ರವಾಗಿದೆ. ಮಸಣದ ಹೂನಿಂದ ಆರಂಭವಾದ ಅಪರ್ಣಾ ಸಿನಿಪಯಣ ಗ್ರೇ ಗೇಮ್ಸ್ ಮೂಲಕ ಮುಕ್ತಾಯವಾಗಿದೆ. ಕನ್ನಡ ಕಲಾಲೋಕದಲ್ಲಿ ತನ್ನದೇ ಛಾಪು ಮೂಡಿಸಿದ್ದ ಅಪರ್ಣಾ ಇಹಲೋಕದ ವ್ಯಾಪಾರ ಮುಗಿಸಿ ಬಾರದ ಲೋಕಕ್ಕೆ ಪಯಣಿಸಿದ್ದಾರೆ. ಭೌತಿಕವಾಗಿ ಅಪರ್ಣಾ ನಮ್ಮನಗಲಿದ್ರೂ ಅವರ ಮಧುರ ಧ್ವನಿ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿಯಲಿದೆ.

ಅಮೀತ್, ಫಿಲ್ಮ್ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES