ಮುಂಬೈ: ಐಷಾರಾಮಿ ಬಿಎಂಡಬ್ಲ್ಯು ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಮೃತಪಟ್ಟ ಘಟನೆಗೆ ಸಂಬಂಧಿಸಿದಂತೆ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. 24 ವರ್ಷದ ಮಿಹಿರ್ ಶಾ ಬಂಧಿತ ವ್ಯಕ್ತಿ.
ಇದನ್ನೂ ಓದಿ: ರಾಮನಗರ, ಕನಕಪುರದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಿಲ್ಲ ಅನುಮತಿ
ಶಿವಸೇನಾ ಪಕ್ಷದ ಸ್ಥಳೀಯ ಮುಖಂಡನ ಪುತ್ರ ಚಾಲನೆ ಮಾಡುತ್ತಿದ್ದ ಎನ್ನಲಾದ ಬಿಎಂಡಬ್ಲ್ಯು ಕಾರು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಮಹಿಳೆಯೋರ್ವಳು ಮೃತಪಟ್ಟಿದ್ದರು. ಮುಂಬೈನ ವರ್ಲಿ ಪ್ರದೇಶದಲ್ಲಿ ಭಾನುವಾರ ಬೆಳಿಗ್ಗೆ ಈ ಘಟನೆ ನಡೆದಿತ್ತು. ವರ್ಲಿ ಕೋಳಿವಾಡ ನಿವಾಸಿ ಕಾವೇರಿ ನಖವಾ (45) ತಮ್ಮ ಪತಿ ಪ್ರದೀಕ್ ನಖವಾ (50) ಅವರೊಂದಿಗೆ ದ್ವಿಚಕ್ರ ವಾಹನದಲ್ಲಿ ಅನ್ನಿ ಬೆಸೆಂಟ್ ರಸ್ತೆಯಲ್ಲಿ ಹೋಗುತ್ತಿದ್ದಾಗ ಅಪಘಾತ ನಡೆದಿತ್ತು. ಡಿಕ್ಕಿಯ ರಭಸಕ್ಕೆ ಕಾರು, ಮಹಿಳೆಯನ್ನು ಸುಮಾರು 2 ಕಿಮೀಗೂ ಹೆಚ್ಚು ದೂರದವರೆಗೆ ಎಳೆದೊಯ್ದಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾರನ್ನು ಓಡಿಸುತ್ತಿದ್ದ 24 ವರ್ಷದ ಯುವಕನ ವಿರುದ್ಧ ಮುಂಬೈ ಪೊಲೀಸರು ಲುಕ್ ಔಟ್ ನೋಟಿಸ್ ಜಾರಿ ಮಾಡಿದ್ದರು. ಅಪಘಾತದ ನಂತರ ಮಿಹಿರ್ ತಪ್ಪಿಸಿಕೊಳ್ಳಲು ಸಹಾಯ ಮಾಡಿದ ಆರೋಪದ ಮೇಲೆ ಮಿಹಿರ್ ತಂದೆ ರಾಜೇಶ್ ಶಾ ಮತ್ತು ಅವರ ಚಾಲಕ ರಾಜೇಂದ್ರ ಸಿಂಗ್ ಬಿಡಾವತ್ ಅವರನ್ನು ಪೊಲೀಸರು ಬಂಧಿಸಿದ್ದರು.