Thursday, September 19, 2024

ಸೋತರು ಗೆಲುವಿನ ಬೆನ್ನೇರಿ ಪದಕಕ್ಕೆ ಮುತ್ತಿಟ್ಟ ಮನು ಭಾಕರ್ ರೋಚಕ ಕಥೆ

ಹರ್ಯಾಣದ ಈ (ಮನು ಭಾಕರ್​) ಹುಡುಗಿ 2021ರ ಟೋಕಿಯೋ ಒಲಿಂಪಿಕ್ಸ್​​ನಲ್ಲೇ ಪದಕ ಗೆಲ್ಲಬೇಕಾಗಿತ್ತು. ಅದುವಲ್ಲದೇ ಮನು ಭಾಕರ್ ಅವರು ಪದಕ ಗೆದ್ದು ತಾಯ್ನಾಡಿಗೆ ಮರಳಬೇಕು ಎಂದು ಪಣ ತೊಟ್ಟೇ ಒಲಿಂಪಿಕ್ಸ್​​​ಗೆ ಕಾಲಿಟ್ಟಿದ್ದರು. ಆದರೆ, ಅರ್ಹತಾ ಸುತ್ತಿನಲ್ಲಿ ಗೆದ್ದು ಇನ್ನೇನು ಫೈನಲ್ ಪ್ರವೇಶ ಮಾಡಿಯೇ ಬಿಟ್ಟರು ಎನ್ನುವಷ್ಟರಲ್ಲಿಯೇ ಕೈಯಲ್ಲಿದ್ದ ಶಸ್ತ್ರ ಕೈ ಕೊಟ್ಟಿತು. ತಾಂತ್ರಿಕ ಸಮಸ್ಯೆಯಿಂದ ಪಿಸ್ತೂಲ್ ಕೆಲಸ ಮಾಡಲಿಲ್ಲ. ಒಲಿಂಪಿಕ್ಸ್ ವಿಜಯ ವೇದಿಕೆಯಲ್ಲಿ ನಿಲ್ಲಬೇಕಿದ್ದವರು ಭಾರವಾದ ಮನಸ್ಸು, ಭಾರವಾದ ಹೆಜ್ಜೆಗಳೊಂದಿಗೆ ಭಾರತಕ್ಕೆ ಮರಳಿದ್ದರು.

ಆ ಸಂದರ್ಭದಲ್ಲಿ ಮನು ಭಾಕರ್ ಅವರು 18 ವರ್ಷದ ಹುಡುಗಿಯಾಗಿದ್ದರು. ಟೋಕಿಯೊದಿಂದ ಬಂದವರೇ ಮನೆ ಸೇರಿಕೊಂಡವರು ಕೆಲವು ದಿನಗಳ ಕಾಲ ತನಗೆ ತಾನೇ ಗೃಹಬಂಧನ ವಿಧಿಸಿಕೊಂಡು ಬಿಟ್ಟರು. ಯಾರೊಂದಿಗೂ ಮಾತಿಲ್ಲ, ಕಥೆಯಿಲ್ಲ. ಸುಮ್ನೆ ಇದ್ದರು ಬಿಟ್ಟರು ಆದರೆ ಅವರೊಳಗೆ ಗೆಲುವಿನ ಛಲ ಅಷ್ಟು ಸುಲಭದಲ್ಲಿ ಮಾಸಿರಲಿಲ್ಲ. ಮನಸ್ಸಿನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಮತ್ತೆ ಸೋತ ಜಾಗದಲ್ಲಿ ಗೆಲ್ಲಬೇಕು ಎಂದು ಪಣತೊಟ್ಟಿದ್ದರು. ಕೆಲವು ದಿನಗಳ ನಂತರ ತನಗೆ ತಾನೇ ವಿಧಿಸಿಕೊಂಡಿದ್ದ ಗೃಹ ಬಂಧನದಿಂದ ಹೊರ ಬಂದವಳೇ ಮತ್ತೆ ಪಿಸ್ತೂಲ್ ಕೈಗೆತ್ತಿಕೊಳ್ಳುತ್ತಾರೆ. ಸತತ ಮೂರು ವರ್ಷಗಳ ನಿರಂತರ ತಪಸ್ಸಿನಿಂದ ಪ್ಯಾರಿಸ್​ಒಲಂಪಿಕ್ಸ್​​ 2024ರಲ್ಲಿ ಕಂಚಿನ ಪದಕದಕ್ಕೆ ಮುತ್ತಿಟ್ಟಿದ್ದಾರೆ.

ಇದನ್ನೂ ಓದಿ: Paris Olympics 2024: ಭಾರತದ ಪದಕ ಭೇಟೆ ಆರಂಭ, ಏರ್​ ಪಿಸ್ತೂಲ್​ ಶೂಟಿಂಗ್​ನಲ್ಲಿ ಮನು ಭಾಕರ್​ಗೆ ಕಂಚು

ಮನು ಭಾಕರ್ ಅವರು ಸಾಮಾನ್ಯ ಹೆಣ್ಣಲ್ಲ. ಆಕೆ ಗಟ್ಟಿಗಿತ್ತಿ, ಸಂಸದ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ನಮ್ಮ ದೇಶದ ಹೆಮ್ಮೆಯ ಕುಸ್ತಿಪಟುಗಳು ದೆಹಲಿಯಲ್ಲಿ ಪ್ರತಿಭಟನೆ ಕುಳಿತಿದ್ದರಲ್ಲ. ಆಗ ದೊಡ್ಡ ದೊಡ್ಡ ಕ್ರೀಡಾಪಟುಗಳೇ ಪ್ರಭುತ್ವಕ್ಕೆ ಹೆದರಿ ಮೌನಕ್ಕೆ ಜಾರಿದ್ದಾಗ, ಆ ಕುಸ್ತಿಪಟುಗಳ ಪರವಾಗಿ ಧ್ವನಿ ಎತ್ತಿದ ಬೆರಳೆಣಿಕೆಯ ಕ್ರೀಡಾಪಟುಗಳಲ್ಲಿ ಈಕೆಯು ಕೂಡ ಒಬ್ಬಳು. ಅದು ಆಕೆಯೊಳಗಿನ ಗಟ್ಟಿತನಕ್ಕೆ ಸಾಕ್ಷಿಯಾಗಿತ್ತು.

ಮನು ಭಾಕರ್ ರೋಚಕ ಕಥೆ:

14ನೇ ವಯಸ್ಸಿನವರೆಗೆ ಮನು ಭಾಕರ್ ಶೂಟಿಂಗ್ ಪಿಸ್ತೂಲ್ ಹಿಡಿದವಳೇ ಅಲ್ಲ. ಬೇರೆ ಬೇರೆ ಸಾಹಸ ಕ್ರೀಡೆಗಳಲ್ಲಿ ತೊಡಗಿಸಿಕೊಂಡವರು (ವಾಲಿಬಾಲ್, ಮಾರ್ಷಲ್ ಆರ್ಟ್ಸ್, ಕರಾಟೆ, ಟೆನಿಸ್) ಅಷ್ಟೇ ಅಲ್ಲದೇ, ಮನು ಭಾಕರ್​ ಅವರು ಆಡಿದ ಅಷ್ಟು ಆಟಗಳಲ್ಲಿ ಜ್ಯೂನಿಯರ್ ನ್ಯಾಷನಲ್ ಮೆಡಲ್​ಗಳನ್ನು ಗೆದ್ದವರು. ಅದೇನೊ ಗೊತ್ತಿಲ್ಲ, 14 ವರ್ಷ ತುಂಬಿ 15ಕ್ಕೆ ಬರುತ್ತಿದ್ದಂತೆ ಪಿಸ್ತೂಲ್​ನತ್ತ ಹೆಚ್ಚು ಒಲವು ಮೂಡಿತು. ಈ ವಿಚಾರವನ್ನು ಅವರ ತಂದೆ ಬಳಿ ಹೇಳಿಕೊಂಡರು ಅಷ್ಟೇ ತಂದೆಗೆ ಮಗಳ ಕ್ರೀಡಾಸಕ್ತಿಯನ್ನು ಕಂಡು ಪಿಸ್ತೂಲ್​ಗೆ ತಗುಲುವ ವೆಚ್ಚವನ್ನು ಭರಿಸಿಬಿಟ್ಟರು.

ಒಂದೇ ವರ್ಷಕ್ಕೆ ಮನು ಭಾಕರ್ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಚಿನ್ನ ಗೆದ್ದು ಬಿಡುತ್ತಾರೆ. ಸದ್ಯ ಈಗ ಅವರ ವಯಸ್ಸು 22. ಈ ವಯಸ್ಸಿಗೆ ಹರ್ಯಾಣದ ಈ ಹೆಣ್ಣು ಮಗಳು ಅಂತರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಗೆದ್ದಿರುವ ಚಿನ್ನದ ಪದಕಗಳ ಸಂಖ್ಯೆ 17.

ವಿಶ್ವಕಪ್​ನಲ್ಲಿ 9, ವಿಶ್ವ ಚಾಂಪಿಯನ್​ಪಿಪ್​ನಲ್ಲಿ 1, ಯೂತ್ ಒಲಿಂಪಿಕ್ಸ್​​ನಲ್ಲೊಂದು, ಏಷ್ಯನ್ ಗೇಮ್ಸ್, ಕಾಮನ್​ವೆಲ್ತ್​​ ಗೇಮ್ಸ್​ನಲ್ಲಿ ತಲಾ ಒಂದೊಂದು ಸ್ವರ್ಣ, ಜ್ಯೂನಿಯರ್ ವಿಶ್ವ ಚಾಂಪಿಯನ್​ಷಿಪ್​ನಲ್ಲಿ 4 ಚಿನ್ನಗಳನ್ನು ಗೆದ್ದವರು ಮನು ಭಾಕರ್​. ಈಗ ನಡೆಯುತ್ತಿರುವ ಪ್ಯಾರಿಸ್​​ ಒಲಿಂಪಿಕ್ಸ್​ನಲ್ಲಿಯೂ ಕಂಚಿನ ಪದಕ ಗೆದ್ದು ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ .

RELATED ARTICLES

Related Articles

TRENDING ARTICLES