Thursday, September 19, 2024

2 ವರ್ಷ ಅಪರ್ಣಾ ಅದೆಂಥಾ ಕಷ್ಟಪಟ್ಟರು ಗೊತ್ತಾ..?

ಫಿಲ್ಮಿ ಡೆಸ್ಕ್​: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನರಾಗಿದ್ದಾರೆ. ಅಪರ್ಣಾ ಸಾವಿನ ಸುದ್ದಿ ಕೇಳಿ ಕೋಟಿ, ಕೋಟಿ ಕನ್ನಡಿಗರು ದಿಗ್ಭ್ರಾಂತರಾಗಿದ್ದಾರೆ. ಅಪ್ಪಟ ಕನ್ನಡ ಭಾಷಾ ಪ್ರೇಮಿಯನ್ನು ಕಳೆದುಕೊಂಡ ಇಡೀ ಕರುನಾಡು ಕಂಬನಿ ಮಿಡಿದಿದೆ. ಕನ್ನಡ  ಭಾಷೆಗೆ ಆಭರಣದಂತೆ ಇದ್ದವರು ಅಪರ್ಣಾ. ಕಲೆ, ಸಾಹಿತ್ಯ, ಸಂಗೀತದ ಒಡನಾಟ, ನೆಮ್ಮದಿಯ ಕುಟುಂಬ. ಇದ್ದುದರಲ್ಲಿ ಖುಷಿ ಪಡುವ ಪೃವತ್ತಿಯ ಅಪರ್ಣಾ ಸದಾ ಸದಾ ನಗ್ ನಗುತ್ತಾ ಇದ್ದವರು. ಆದ್ರೆ ಇಂಥಾ ಹಸನ್ಮುಖಿಯ ಕೊನೆಯ ದಿನಗಳು ಮಾತ್ರ ತುಂಬಾನೇ ದುಃಖದಾಯಕವಾಗಿದ್ವು.

ಶ್ವಾಸಕೋಶದ ಕ್ಯಾನ್ಸರ್​ಗೆ ತುತ್ತಾಗಿದ್ದ ಅಪರ್ಣಾ. ಆ ಮಾರಣಾಂತಿಕ ಖಾಯಿಲೆಯ ಜೊತೆಗೆ ಸೆಣೆಸ್ತಾನೇ ಪ್ರಾಣ ಕಳೆದುಕೊಂಡಿದ್ದಾರೆ. ಎರಡು ವರ್ಷಗಳ ಹಿಂದೆಯೇ ಅಪರ್ಣಾಗೆ ಶ್ವಾಸಕೋಶದ ಕ್ಯಾನ್ಸರ್ ಇರೋದು ಗೊತ್ತಾಗುತ್ತೆ. ವೈದ್ಯರು ಹೆಚ್ಚೆಂದರೇ 6 ತಿಂಗಳು ಬದುಕಬಹುದು ಅಂತ ಹೇಳಿದ್ರಂತೆ. ಆದ್ರೆ ಗಟ್ಟಿಗಿತ್ತಿ ಅಪರ್ಣಾ ಎರಡು ವರ್ಷಗಳ ಕಾಲ ಕ್ಯಾನ್ಸರ್ ಜೊತೆ ಸೆಣೆಸ್ತಾನೇ ಬದುಕು ನಡೆಸಿದ್ರು. ಆದ್ರೆ ಕೊನೆ ಕೊನೆಯ ದಿನಗಳು ಅಪರ್ಣಾಗೆ ತುಂಬಾನೇ ತ್ರಾಸದಾಯಕವಾಗಿದ್ವು ಅಂತಾರೆ ಆಪ್ತರು.

ಇದನ್ನೂ ಓದಿ: ಪುಟ್ಟಣ್ಣ ಪರಿಚಯಿಸಿದ ತಾರೆ ಅಪರ್ಣಾ..‘ಮಸಣ’ ಸೇರಿದ ‘ಹೂವು’

ಈ ಶ್ವಾಸಕೋಶದ ಕ್ಯಾನ್ಸರ್​ನ  ಶ್ವಾಸಕೋಶದ ಕಾರ್ಸಿನೋಮ ಅಂತ ಕೂಡ ಕರೀತಾರೆ. ಇದು ಶ್ವಾಸಕೋಶದಲ್ಲಿ ಬೆಳೆಯುವ ವ ಮಾರಣಾಂತಿಕ ಗೆಡ್ಡೆಯಾಗಿದೆ. ಸಾಮಾನ್ಯವಾಗಿ ಸಿಗರೇಟ್ ಧೂಮಪಾನ ಅಥವಾ ಹಾನಿಕಾರಕ ರಾಸಾಯನಿಕಗಳನ್ನು ಉಸಿರಾಡುವುದರಿಂದ ಈ ಕ್ಯಾನ್ಸರ್ ಬರುತ್ತೆ, ಆದ್ರೆ ದುರಂತ ಅಂದ್ರೆ ಈ ಮಾರಿ ಯಾವುದೇ ದುಶ್ಚಟಗಳಿಲ್ಲದ ಅಪರ್ಣಾರ ಶ್ವಾಸಕೋಶಗೆ ತಗುಲಿಕೊಂಡಿತ್ತು.

2022ರ ಜುಲೈನಲ್ಲಿ ಅಪರ್ಣಾಳನ್ನ ಪರೀಕ್ಷೆ ಮಾಡಿದ್ದ ವೈದ್ಯರು 4ನೇ ಹಂತದ ಕ್ಯಾನ್ಸರ್ ಇರೋದನ್ನ ಪತ್ತೆ ಹಚ್ಚಿದ್ರು. ಸಾಮಾನ್ಯ 1 ಅಥವಾ 2ನೇ ಹಂತದಲ್ಲೇ ಕ್ಯಾನ್ಸರ್ ಪತ್ತೆಯಾದ್ರೆ ರೆಡಿಯೋಥೆರಪಿ ಮೂಲಕ ಕ್ಯಾನ್ಸರ್ ಗಡ್ಡೆಯನ್ನ ತೆಗೆದುಹಾಕ್ತಾರೆ. ಮೂರನೇ ಹಂತದಲ್ಲಿದ್ರೂ ಕಿಮಿಯೋಥೆರಪಿ ಚಿಕಿತ್ಸೆ ಕೊಟ್ಟು ರೋಗಿಯನ್ನ ಬದುಕಿಸಿಕೊಳ್ಳಬಹುದು. ಆದ್ರೆ ಅಪರ್ಣಾಗೆ ಆದಾಗಲೇ ಕ್ಯಾನ್ಸರ್ 4ನೇ ಹಂತದಲ್ಲಿತ್ತು.

ಈ ಹಂತದ  ಕ್ಯಾನ್ಸರ್ ತಲುಪಿದವರಿಗೆ, ಉಸಿರಾಟದ ಸಮಸ್ಯೆಗಳು ಕಾಡುತ್ತೆ. ಕೆಮ್ಮುವುದು, ಉಸಿರಾಟದ ತೊಂದರೆ ಮತ್ತು ಎದೆ ನೋವು ಅಪರ್ಣಾನ ಬಾಧಿಸಿತ್ತು. ಈ ನೋವನ್ನ ಸಹಿಸ್ತಾನೇ ಗಟ್ಟಿಮನಸು ಮಾಡಿಕೊಂಡು ಅಪರ್ಣಾ ಒಂದೂವರೇ ವರ್ಷ ಕಳೆದಿದ್ರು. ಆದ್ರೆ ಕಳೆದ ಫೆಬ್ರುವರಿಯಲ್ಲಿ ಅಪರ್ಣಾಗೆ ನೋವು ಹೆಚ್ಚಾಗ್ತಾ ಹೋಯ್ತಂತೆ. ಕೆಮ್ಮಿನ ಜೊತೆಗೆ ರಕ್ತ ಬರ್ತಾ ಇತ್ತಂತೆ. ಈ ನೋವಿನಿಂದ ಅಪರ್ಣಾ ಕುಗ್ಗಿಹೋಗಿದ್ರು.

ಇಷ್ಟೆಲ್ಲಾ ಒದ್ದಾಟದ ನಡುವೆಯೂ ತಮ್ಮ ಅನಾರೋಗ್ಯದ ವಿಚಾರವನ್ನ ಅಪರ್ಣಾ ಗುಟ್ಟಾಗಿ ಇಟ್ಟಿದ್ರು. ತೀರಾ ಆಪ್ತರನ್ನ ಬಿಟ್ರೆ ಬೇರೆಯವರಿಗೆ ಅಪರ್ಣಾಳ ಕ್ಯಾನ್ಸರ್ ವಿಚಾರ ಗೊತ್ತಿರಲಿಲ್ಲ. ಪತಿ ನಾಗರಾಜ್ ವಸ್ತಾರೆ ಅಪರ್ಣಾಳನ್ನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ತಾ ಇದ್ರು. ಇಬ್ಬರು ಸೇರಿ ಕ್ಯಾನ್ಸರ್ ಮಾರಿ ಜೊತೆಗೆ ಹೋರಾಡ್ತಾ ಇದ್ರು. ಆದ್ರೆ ಕೊನೆಗೂ ಕ್ಯಾನ್ಸರ್ ಮಾರಿಯೇ ಗೆದ್ದುಬಿಡ್ತು. ಕನ್ನಡದ ಕಂಠವನ್ನ ಶಾಶ್ವತವಾಗಿ ಸ್ಥಬ್ದಮಾಡಿಬಿಟ್ತು.

ಫಿಲಂ ಬ್ಯೂರೋ, ಪವರ್ ಟಿವಿ.

RELATED ARTICLES

Related Articles

TRENDING ARTICLES