Thursday, September 19, 2024

ರಾಜ್ಯದ ಹಲವೆಡೆ ರೆಡ್ ಅಲರ್ಟ್ ಘೋಷಸಿದ ಹವಾಮಾನ ಇಲಾಖೆ

ಬೆಂಗಳೂರು: ಮುಂಗಾರು ಮಾರುತಗಳು ರಾಜ್ಯಾದ್ಯಂತ ಆವರಿಸಿಕೊಂಡಿದ್ದು, ಧಾರಾಕಾರ ಮಳೆ ಸುರಿಯುತ್ತಿದೆ. ಈ ಹಿನ್ನೆಲೆ ಹಲವು ಜಿಲ್ಲೆಗಳಿಗೆ ಇಂದೂ ಕೂಡ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿದೆ.

ಕರಾವಳಿ ಜಿಲ್ಲೆಗಳಾದ ಉಡುಪಿ, ಉತ್ತರ ಕನ್ನಡ ಮತ್ತು ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಗದಗದಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಇರಲಿದೆ. ಉಳಿದಂತೆ ಬಾಗಲಕೋಟೆ, ಹಾವೇರಿ, ಕೊಪ್ಪಳ, ವಿಜಯಪುರ, ಶಿವಮೊಗ್ಗ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ನೀಡಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗಲಿದೆ. ಬೆಳಗಾವಿ, ಗದಗ, ಧಾರವಾಡ ಜಿಲ್ಲೆಗಳಲ್ಲಿ ಪ್ರತಿ ಗಂಟೆಗೆ ಚದುರಿದ ಗಾಳಿ 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಬೀಸಲಿದ್ದು, ಧಾರಾಕಾರ ಮಳೆಯ ಸಾಧ್ಯತೆ ಇದೆ.

ಧಾರಾಕಾರ ಮಳೆಗೆ ಜನ ಜೀವನ ಅಸ್ತವ್ಯಸ್ತ:

ಕಲಬುರಗಿ ಜಿಲ್ಲೆಯಲ್ಲಿ ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.. ಸೇಡಂ ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ರಸ್ತೆಗಳು ಕೆರೆಯಂತಾಗಿವೆ. ರಸ್ತೆ ಬದಿ ನಿಲ್ಲಿಸಿದ್ದ ರೈತರ ಎತ್ತಿನ ಗಾಡಿ ಮಳೆ ನೀರಲ್ಲಿ ಕೊಚ್ಚಿ ಹೋಗಿದೆ. ಮಹಾಂತೇಶ್ವರ ಮಠಕ್ಕೂ ನೀರು ನುಗ್ಗಿದೆ. ಗ್ರಾಮ ಸಂಪೂರ್ಣ ಕೆರೆಯಂತೆ ಮಾರ್ಪಾಟ್ಟಿದ್ದು, ಗ್ರಾಮದ ಜನರು ಹೈರಾಣಾಗಿದ್ದಾರೆ.

ಇದನ್ನೂ ಓದಿ: ಕಟ್ಟಿಕೊಂಡ ಗಂಡನಿಗೆ ‘ಸಜಾ’.. ಮಜಾ ವಿತ್​ ‘ಸೃಜಾ’?

ರಾಯಚೂರಿನಲ್ಲಿ ವರುಣನ ಅಬ್ಬರ:

ರಾಯಚೂರು ನಗರ ಹಾಗೂ ಜಿಲ್ಲೆಯ ಹಲವೆಡೆ ವರುಣನ ಅಬ್ಬರ ಜೋರಾಗಿದೆ. ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ನಗರದ ಆರ್.ಟಿ.ಓ ವೃತ್ತದಲ್ಲಿ ರಸ್ತೆ ತುಂಬೆಲ್ಲಾ ನೀರು ಹರಿದು ವಾಹನ ಸಂಚಾರ ಅಸ್ತವ್ಯಸ್ತವಾಗಿದ್ದು, ವಾಹನ ಸವಾರರು ಪರದಾಡುವಂತಾಯಿತು. ಮಳೆಯಿಂದಾಗಿ ನಗರದ ಹಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.

ಭಾರೀ ಮಳೆ; ಉಕ್ಕಿ ಹರಿಯುತ್ತಿರುವ ಡೋಣಿ ನದಿ

ನಿನ್ನೆ ತಡ ರಾತ್ರಿ ಸುರಿದ ಭಾರೀ ಮಳೆಯ ಪರಿಣಾಮ ವಿಜಯಪುರ ಜಿಲ್ಲೆಯ ಡೋಣಿ ನದಿ ತುಂಬಿ ಹರಿಯುತ್ತಿದೆ. ಇದರಿಂದ‌ ಡೋಣಿ‌ ನದಿ ಪಾತ್ರದ ಸಾವಿರಾರು ಎಕರೆ ಪ್ರದೇಶದಲ್ಲಿನ ರೈತರ ಜಮೀನಿಗೆ ನೀರು ನುಗ್ಗಿದೆ. ಪ್ರತಿ ಬಾರಿ ಮಳೆಗಾಲದ ಸಂದರ್ಭದಲ್ಲಿ ಡೋಣಿ ನದಿ ಪಾತ್ರದ ಜನರ ಗೋಳು ಇದು ತಪ್ಪಿದ್ದಲ್ಲ. ಇನ್ನೂ ಹಲವು ಬಾರಿ ಡೋಣಿ ನದಿಯಲ್ಲಿನ ಹೂಳನ್ನು ತೆಗೆಯಬೇಕು ಎಂದು ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ.

ಮನೆಗಳಿಗೆ ನುಗ್ಗಿದ ನೀರು:

ವಿಜಯಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ‌ ಸುರಿದ ಧಾರಾಕಾರ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿಯ ಕೆಲ ಮನೆಗಳಿಗೆ ನೀರು ನುಗ್ಗಿದೆ. ಮಳೆ ನೀರನ್ನು ಜನರು ಹೊರಗೆ ಹಾಕುತ್ತಿದ್ದಾರೆ. ಸತತವಾಗಿ 3 ಗಂಟೆಗಳ ಕಾಲ ಭಾರಿ ಮಳೆ ಸುರಿದಿದೆ. ರಾತ್ರಿಯೆಲ್ಲಾ ಜನರು ಜಾಗರಣೆ ಮಾಡುವಂತಾಯಿತು. ಬೆಳಿಗ್ಗೆಯಿಂದಲೂ ಮೋಡ ಮುಸುಕಿದ ವಾತಾವರಣ ಹಾಗೂ ಜಿಟಿ ಜಿಟಿ ಮಳೆ ಶುರುವಾಗಿದೆ.

RELATED ARTICLES

Related Articles

TRENDING ARTICLES