Tuesday, September 17, 2024

ಜಮೀನಿಗೆ ತೆರಳಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಸಾವು

ಕಲಬುರಗಿ : ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಜಮೀನಿಗೆ ತೆರಳಿದ್ದ ವೇಳೆ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ದುರ್ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ.

ಕಲಬುರಗಿಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ರೈಲ್ವೆ ಕಾಲೋನಿಯ ಇಬ್ಬರು ನಿವಾಸಿಗಳು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಏಕನಾಥ್ ವಾಘಮೂಡೆ (55) ಹಾಗೂ ಸತೀಶ್ ಶಳಕೆ (40) ಮೃತ ದುರ್ದೈವಿಗಳು. ಇವರು ವಾಡಿ ಪಟ್ಟಣದ ರೈಲ್ವೆ ಕಾಲೋನಿಯ ನಿವಾಸಿಗಳು.

ಇಬ್ಬರು ಇಂದು ಜಮೀನಿಗೆ ತೆರಳಿದ್ದರು. ಮಳೆ ಆರಂಭವಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆಯತ್ತ ಹೊರಟಿದ್ದರು. ಜಮೀನಿನಿಂದ ಇನ್ನೇನು ಮನೆಗೆ ತಲುಪುವಷ್ಟರಲ್ಲೇ ಗುಡುಗು, ಸಿಡಿಲು ಸಹಿತ ಭಾರಿ ಮಳೆ ಆರಂಭವಾಗಿದೆ. ಈ ವೇಳೆ ರಕ್ಷಣೆಗಾಗಿ ಅಲ್ಲೇ ಸಮೀಪವಿದ್ದ ಮರದಡಿ ನಿಂತಿದ್ದಾರೆ. ಆಗ ಮರಕ್ಕೆ ಸಿಡಿಲು ಬಡಿದು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ವಾಡಿ ಪಟ್ಟಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಳೆ ನೀರು ನುಗ್ಗಿ ಕೆರೆಯಂತಾದ ಗಾರ್ಡನ್

ಗುಡುಗು ಸಹಿತ ಸುರಿದ ಭಾರಿ ಮಳೆಗೆ ಯಾದಗಿರಿ ನಗರದ ಹೊಸಳ್ಳಿ ಕ್ರಾಸ್‌ ಬಳಿ ಇರುವ ಹಜರತ್ ಕಾಲೋನಿಯ ಸಾರ್ವಜನಿಕ ಉದ್ಯಾನವನ ಕೆರೆಯಂತಾಗಿದೆ. ಸಂಜೆ ಸುಮಾರು ಎರಡು ಗಂಟೆಗಳ ಕಾಲ ಮಳೆಯಿತು. ಒಳಚರಂಡಿ ಬ್ಲಾಕ್‌ ಆದ ಪರಿಣಾಮ ಒಳಚರಂಡಿ ನೀರು ಹಾಗೂ ರಸ್ತೆ ಬದಿಯ ನೀರು ಗಾರ್ಡನ್ ಗೆ ನುಗ್ಗಿದ ಪರಿಣಾಮ ಗಾರ್ಡನ್‌ನಲ್ಲಿರುವ ಆಟೋಪಕರಣಗಳು ನೀರಿನಲ್ಲಿ ಮುಳುಗಿ ಗಾರ್ಡನ್ ಹೋಗಿ ಕೆರೆಯಂತಾಗಿತ್ತು. ಇನ್ನು ಹೈದರಾಬಾದ್ ಬಿಜಾಪುರ ಹೆದ್ದಾರಿಯಲ್ಲಿ ಮೊಳಕಾಲಿನವರೆಗೆ ನೀರು ನಿಂತಿದ್ದವು. ಇದರಿಂದಾಗಿ ವಾಹನ ಸವಾರರು ಕೆಲಕಾಲ ಪರದಾಡುವಂತಾಯಿತು.

RELATED ARTICLES

Related Articles

TRENDING ARTICLES