ಹಾವೇರಿ : ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಹಾವೇರಿ ತಾಲೂಕಿನ ಕುರುಬಗೊಂಡ ಗ್ರಾಮದಲ್ಲಿ ನಡೆದಿದೆ.
ದಯಾನಂದ ಬೆಂಕಿ (22) ಮೃತ ದುರ್ದೈವಿ ಯುವಕ. ಹಾವೇರಿ ಜಿಲ್ಲೆಯಾದ್ಯಂತ ಗುಡುಗು ಸಹಿತ ಭಾರಿ ಮಳೆಯಾಗಿದೆ. ಈ ವೇಳೆ ಮರದ ಕೆಳಗೆ ನಿಂತಿದ್ದ ದಯಾನಂದ ಸಿಡಿಲು ಬಡಿದು ಸಾವನಪ್ಪಿದ್ದಾನೆ. ಹಾವೇರಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಸಿಡಿಲು ಬಡಿದು ಹಸು (ಆಕಳು) ಸಾವನ್ನಪ್ಪಿದೆ. ಮನಗೂಳಿಯ ಗ್ರಾಮದ ಪಾಂಡು ಜಾಧವ ಎಂಬವರ ಜಮೀನಿನಲ್ಲಿ ಈ ಘಟನೆ ನಡೆದಿದೆ. ತೋಟದಲ್ಲಿದಾಗ ಸಿಡಿಲು ಬಡಿದು ಒಂದು ಆಕಳು ಮೃತಪಟ್ಟಿದೆ. ಮನಗೂಳಿ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ. ಒಳಚರಂಡಿ ವ್ಯವಸ್ಥೆ ಸರಿಯಾಗಿಲ್ಲದ ಕಾರಣ ಅಂಗಡಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಬ್ಯಾಳಿಕಾಟಾದಲ್ಲಿನ ಐದು ಅಂಗಡಿಗಳಿಗೆ ನೀರು ನುಗ್ಗಿದೆ. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ನಗರಸಭೆ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಹಿಡಿಶಾಪ ಹಾಕಿದ್ದಾರೆ. ನಿರಂತರ ಗಾಳಿ ಮಳೆಗೆ ವಾಹನ ಸವಾರರು ಹೈರಾಣಾಗಿದ್ದಾರೆ.