Saturday, May 4, 2024

5 ವರ್ಷಕ್ಕೊಮ್ಮೆ ಬಂದು ಹೋಗುವ ರಾಘಣ್ಣ ಅಲ್ಲ : ಬಿ.ವೈ. ರಾಘವೇಂದ್ರ

ಶಿವಮೊಗ್ಗ : ಐದು ವರ್ಷಕ್ಕೊಮ್ಮೆ ಬಂದು ಹೋಗುವ ರಾಘಣ್ಣ ಅಲ್ಲ. ಗ್ರಾಮ ಪಂಚಾಯತಿ ಸದಸ್ಯನ ತರ ನಿಮ್ಮ ಜೊತೆಗೆ ಇದ್ದೇನೆ. 20 ಸಾವಿರ ಕೋಟಿ ಅನುದಾನ ತಂದಿದ್ದೇನೆ ಎಂದು ಸಂಸದ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.

ಶಿವಮೊಗ್ಗ ಜಿಲ್ಲೆಯ ಹೊಳಲೂರಿನ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶಕ್ಕಾಗಿ, ರೈತರಿಗಾಗಿ, ಮಹಿಳೆಯರಿಗಾಗಿ ನಡೆಯುತ್ತಿರುವ ಚುನಾವಣೆ ಇದು. ಈ ಬಾರಿ ಎಲ್ಲರೂ ಆಶೀರ್ವಾದ ಮಾಡಿ ಗೆಲ್ಲಿಸಿ. ಕಾಂಗ್ರೆಸ್​ನವರ ಮನೆಗೆ ಹೋಗಿ ವೋಟು ಹಾಕಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಹೇಳುತ್ತಾರೆ. ಅಕ್ಕಿ ಕೊಡುತ್ತಿರೋದು ಕಾಂಗ್ರೆಸ್ ಸರ್ಕಾರ ಅಲ್ಲ. ನಾವು ಕೊಡುತ್ತಿರುವ ಅಕ್ಕಿಗೆ ಇವರ ಹೆಸರು ಹಾಕಿಕೊಳ್ಳುತ್ತಿದ್ದಾರೆ. ಮದ್ಯದ ಮೇಲೆ ತೆರಿಗೆ ವಿಧಿಸಿ ಮಹಿಳೆಯರಿಗೆ 2,000 ಕೊಡುತ್ತಿದ್ದಾರೆ. ರೈತರಿಗೆ ನಿರುದ್ಯೋಗ ಭತ್ಯೆ ಕೊಡುತ್ತೇವೆ ಅಂದ್ರು. ಸರಿಯಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಸೌಲಭ್ಯ ಇಲ್ಲ. ಹೈನುಗಾರಿಕೆ ಮಾಡಿದ ರೈತರಿಗೆ ಸಿದ್ದರಾಮಯ್ಯ ಸರ್ಕಾರ ಪ್ರೋತ್ಸಾಹಧನ ನೀಡಿಲ್ಲ ಎಂದು ಕುಟುಕಿದರು.

ಕಾಂಗ್ರೆಸ್ ಕೇವಲ 5 ಕ್ಷೇತ್ರ ಗೆದ್ದಿದೆ

ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆದರೂ ದಲಿತರ ಏಳಿಗೆಗೆ ಕಾಂಗ್ರೆಸ್ ಏನು ಮಾಡಿಲ್ಲ. 10 ವರ್ಷದಲ್ಲಿ ಶೋಷಿತ ಪೀಡಿತ ಸಮಾಜಗಳಿಗೆ ಮೋದಿ ಅವರು ಅನೇಕ ಯೋಜ‌ನೆ ಕೊಟ್ಟಿದ್ದಾರೆ. 84 ಲೋಕಸಭಾ ಕ್ಷೇತ್ರಗಳು ಎಸ್.ಸಿ. ಕ್ಷೇತ್ರಗಳಾಗಿವೆ. 46 ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಕೇವಲ 5 ಗೆದ್ದಿದೆ ಎಂದು ಹೇಳಿದರು.

ಬಡವರನ್ನು ಕಾಂಗ್ರೆಸ್ ಪ್ರೀತಿಸಲಿಲ್ಲ

ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ವಿರೋಧ ಪಕ್ಷದ ನಾಯಕರು ಸಹ ಇಲ್ಲ. ಕಾಂಗ್ರೆಸ್​ ಬಡತನವನ್ನು ಪ್ರೀತಿ ಮಾಡಿಕೊಂಡು ಬಂತು. ಬಡವರನ್ನು ಕಾಂಗ್ರೆಸ್ ಪ್ರೀತಿಸಲಿಲ್ಲ. ಬಡವರು ಬಡವರೇ ಆಗಿರಬೇಕು ಎನ್ನುವುದು ಕಾಂಗ್ರೆಸ್ ನೀತಿ ಎಂದು ಬಿ.ವೈ. ರಾಘವೇಂದ್ರ ವಾಗ್ದಾಳಿ ನಡೆಸಿದರು.

RELATED ARTICLES

Related Articles

TRENDING ARTICLES