Tuesday, September 17, 2024

ಆಂಗ್ಲರಿಗೆ ಸೋಲು.. 4-1 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಭಾರತ, 112 ವರ್ಷಗಳ ಬಳಿಕ ಇತಿಹಾಸ ಸೃಷ್ಟಿ

ಬೆಂಗಳೂರು : ಧರ್ಮಶಾಲಾದಲ್ಲಿ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧದ ಭಾರತ ಭರ್ಜರಿ ಜಯಭೇರಿ ಬಾರಿಸಿತು. ಈ ಗೆಲುವಿನೊಂದಿಗೆ 5 ಪಂದ್ಯಗಳ ಸರಣಿಯನ್ನು ಭಾರತ 4-1 ಅಂತರದಿಂದ ಗೆದ್ದು ಬೀಗಿತು.

ಸರಣಿಯ ಮೊದಲ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದ್ದ ಇಂಗ್ಲೆಂಡ್, ಉಳಿದ ನಾಲ್ಕು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿತು. ಅಂತಿಮ ಟೆಸ್ಟ್​ನಲ್ಲಿ ಇಂಗ್ಲೆಂಡ್ 64 ರನ್​ ಹಾಗೂ ಇನ್ನಿಂಗ್ಸ್​ ಸೋಲು ಅನುಭವಿಸಿತು.

ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​ನಲ್ಲಿ 218 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕೆ ಉತ್ತರವಾಗಿ ಭಾರತ 477 ರನ್​ ಗಳಿಸಿತ್ತು. 259 ರನ್​ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಇಂಗ್ಲೆಂಡ್​ ರವಿಚಂದ್ರನ್​ ಅಶ್ವಿನ್ ಸ್ಪಿನ್​ ಮೋಡಿಗೆ ಧೂಳಿಪಟವಾಯಿತು. 195 ರನ್​ಗಳಿಗೆ ಇಂಗ್ಲೆಂಡ್​ ಆಲೌಟ್​ ಆಯಿತು. ಭಾರತದ ಪರ ಆರ್. ಅಶ್ವಿನ್ 5, ಬುಮ್ರಾ ಹಾಗೂ ಕುಲ್​ದೀಪ್ ಯಾದವ್ ತಲಾ 2 ಹಾಗೂ ಜಡೇಜಾ 1 ವಿಕೆಟ್ ಪಡೆದು ಮಿಂಚಿದರು.

ಟೆಸ್ಟ್​ ಕ್ರಿಕೆಟ್​ನಲ್ಲಿ 3 ಬಾರಿ ವಿಶೇಷ ದಾಖಲೆ

ಆಂಗ್ಲರನ್ನು ಬಗ್ಗುಬಡಿದ ಭಾರತ ಟೆಸ್ಟ್​ ಕ್ರಿಕೆಟ್​ನಲ್ಲಿ ಐತಿಹಾಸಿಕ ದಾಖಲೆ ನಿರ್ಮಿಸಿತು. ಟೆಸ್ಟ್​ನಲ್ಲಿ ಮೊದಲ ಪಂದ್ಯ ಸೋತು, ಬಳಿಕ 4-1 ಅಂತರದಿಂದ ಸರಣಿ ಗೆದ್ದ ವಿಶೇಷ ದಾಖಲೆ ಬರೆಯಿತು. ಟೆಸ್ಟ್​ ಕ್ರಿಕೆಟ್​ನಲ್ಲಿ ಈವರೆಗೆ 3 ಬಾರಿ ಈ ರೀತಿಯ ವಿಶೇಷ ದಾಖಲೆ ನಿರ್ಮಾಣವಾಗಿದೆ.

112 ವರ್ಷಗಳ ಬಳಿಕ ಇತಿಹಾಸ ಬರೆದ ಭಾರತ

1897-98 ಮತ್ತು 1901-02 ರಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಾ 4-1 ಅಂತರದಿಂದ 2 ಬಾರಿ ಸರಣಿ ಗೆದ್ದಿತ್ತು. 1912 ರಲ್ಲಿ ಇಂಗ್ಲೆಂಡ್ ತಂಡ ಈ ಸಾಧನೆ ಮಾಡಿತ್ತು. ಇದೀಗ 112 ವರ್ಷಗಳ ಬಳಿಕ ಭಾರತ 4-1 ಅಂತರದಿಂದ ಇಂಗ್ಲೆಂಡ್ ತಂಡವನ್ನು ಮಣಿಸಿ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಮೊದಲ ಪಂದ್ಯವನ್ನು ಸೋತು 4-1 ಅಂತರದಿಂದ ಸರಣಿ ಗೆದ್ದ ವಿಶ್ವದ ಮೂರನೇ ತಂಡ ಎಂಬ ಶ್ರೇಯಕ್ಕೆ ಪಾತ್ರವಾಯಿತು.

RELATED ARTICLES

Related Articles

TRENDING ARTICLES