ಬೆಂಗಳೂರು : ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜಕೀಯ ಹಗ್ಗಾ ಜಗ್ಗಾಟ ತಣ್ಣಗಾಗುವಂತೆ ಕಾಣುತ್ತಿಲ್ಲ. ಇದಕ್ಕೆ ಸಾಕ್ಷಿಯೆಂಬಂತೆ ಡಿ.ಕೆ ಶಿವಕುಮಾರ್ ಅವರು ಹಾಸನದಲ್ಲಿ ಎಚ್ಡಿಕೆಗೆ ಟಾಂಗ್ ಕೊಟ್ಟಿದ್ದಾರೆ.
ಹಾನಸದ ಆಲೂರಿನಲ್ಲಿ ಹಮ್ಮಿಕೊಂಡಿದ್ದ ಪ್ರಜಾಧ್ವನಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿರುವ ಡಿ.ಕೆ ಶಿವಕುಮಾರ್ ಅವರು, ಎಚ್.ಡಿ.ಕುಮಾರಸ್ವಾಮಿಯವರಿಗೆ ಮುಖ್ಯಮಂತ್ರಿಯಾಗಲು ಪ್ರೋತ್ಸಾಹ ನೀಡಿದೆವು. ಅವರಿಗೆ ಅಧಿಕಾರ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸಮಯ ಸಿಕ್ಕಾಗ ಅಧಿಕಾರಕ್ಕಾಗಿ ಯಾವ ಪಕ್ಷದ ಜೊತೆಯಾದರೂ ಹೋಗುತ್ತಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ಕರ್ನಾಟಕ ರಾಜ್ಯ ದೇಶದಲ್ಲಿ ಭ್ರಷ್ಟಾಚಾರದ ಕೇಂದ್ರಸ್ಥಾನ. ಬಿಜೆಪಿ ಆಡಳಿತದಲ್ಲಿ ಪಿ.ಎಸ್.ಐ. ನೇಮಕಾತಿ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ಸೇರಿ 100 ಜನ ಜೈಲು ಸೇರಿರುವುದು ಇದಕ್ಕೆ ಸಾಕ್ಷಿ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಪ್ರಕರಣವನ್ನು ಮರು ಪರಿಶೀಲನೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಆಗೋದು ಹಣೆಯಲ್ಲಿ ಬರೆದಿರಬೇಕು : ಡಿಕೆಶಿಗೆ ಟಾಂಗ್ ಕೊಟ್ಟ ಆರ್. ಅಶೋಕ್
ವೈಸ್ ಚಾನ್ಸಲರ್ ಹುದ್ದೆಗೆ 10 ಕೋಟಿ ಲಂಚ
ಮೈಸೂರು ಸಂಸದ ಪ್ರತಾಪಸಿಂಹ ವೈಸ್ ಚಾನ್ಸಲರ್ ಹುದ್ದೆ ಪಡೆಯಲು 10 ಕೋಟಿ ರೂ. ಲಂಚ ಪಡೆಯಲಾಗುತ್ತಿದೆ ಎಂದಿರುವುದನ್ನು ಸರ್ಕಾರ ಏಕೆ ಗಂಭೀರವಾಗಿ ಪರಿಗಣಿಸಿಲ್ಲ. ಅನುದಾನ ಪಡೆಯಲು ಶೇ. 30ರಷ್ಟು ಲಂಚ ಕೊಡಬೇಕು ಎಂದು ಸ್ವಾಮೀಜಿಗಳು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಭರವಸೆ ಪ್ರಸ್ತಾಪಿಸಿದ ಡಿಕೆಶಿ
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲಾಗುವುದು. ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ, ಕುಟುಂಬದ ಯಜಮಾನಿ ಖಾತೆಗೆ 2000. ರೂ. ಖಚಿತ ಮತ್ತು ಪ್ರತಿ ಬಿ.ಪಿ.ಎಲ್. ಕುಟುಂಬಕ್ಕೆ 10 ಕೆ.ಜಿ. ಅಕ್ಕಿ ಉಚಿತವಾಗಿ ನೀಡಲಾಗುವುದು’ ಎಂದು ಭರವಸೆ ನೀಡಿದ್ದಾರೆ.