Saturday, May 11, 2024

ಮೀನುಗಾರರ ದೋಣಿ ಮೇಲ್ದರ್ಜೆಗೇರಿಸಲು ಸರ್ಕಾರದಿಂದ ಸಹಾಯಧನ: ಸಿಎಂ ಬೊಮ್ಮಾಯಿ

ಉಡುಪಿ; ಮುಂದಿನ ದಿನಗಳಲ್ಲಿ ಮೀನುಗಾರರು ಬಳಸುವ ಸೀಮೆಎಣ್ಣೆ ಮೋಟರುಗಳ ದೋಣಿಗಳನ್ನು ಪೆಟ್ರೋಲ್ ಮೋಟರ್ ದೋಣಿಗಳಿಗೆ ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ಸಹಾಯ ಧನ ನೀಡಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಭಾರತೀಯ ಜನತಾ ಪಕ್ಷದ ಜನಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು. ಮೀನುಗಾರರ ಬೇಡಿಕೆಯಂತೆ ಕೇಂದ್ರ ಸರ್ಕಾರದೊಂದಿಗೆ ಚರ್ಚಿಸಿ ಮೀನುಗಾರರಿಗೆ ಸೀಮೆ ಎಣ್ಣೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸಲಾಗುವುದು. ಕರಾವಳಿ ಭಾಗದಲ್ಲಿ ಬೆಳೆದ ಕುಚಲಕ್ಕಿಯನ್ನು ಖರೀದಿಸಿ ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಮೂಲಕ ವಿತರಿಸಲು ಕ್ರಮ ಕೈಗೊಳ್ಳಲಾಗುವುದು. ಮೀನುಗಾರಿಕೆ ಚಟುವಟಿಕೆಗಳಿಗೆ 8 ಮೀನುಗಾರ ಬಂದರುಗಳನ್ನು ಅಭಿವೃದ್ಧಿಪಡಿಸಲು ಆಯವ್ಯಯದಲ್ಲಿ ಅನುದಾನ ಕಲ್ಪಿಸಲಾಗಿದ್ದು, ಪ್ರಕ್ರಿಯೆ ಪ್ರಾರಂಭವಾಗಿದೆ.

ಈ ವರ್ಷ 100 ಹೈ ಸ್ಪೀಡ್ ದೋಣಿಗಳನ್ನು ನೀಡಲು ಕ್ರಮವಹಿಸಲಾಗಿದ್ದು, ಅದರಲ್ಲಿ ಶೇ 40% ರಷ್ಟು ಸಬ್ಸಿಡಿ ವ್ಯವಸ್ಥೆಯಿದೆ. ಈ ಯೋಜನೆಗೆ ಜನರ ಪ್ರತಿಕ್ರಿಯೆಯನ್ನು ಅವಲೋಕಿಸಿ ಮುಂದಿನ ವರ್ಷದಿಂದ ಹೈಸ್ಪೀಡ್ ದೋಣಿಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದು. ಮಂಗಳೂರು ಹಾಗೂ ಕಾರವಾರ ಬಂದರು ಅಭಿವೃದ್ದಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಕರಾವಳಿ ಭಾಗದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ ಎಂದರು.

ಕೇಂದ್ರ ಸರ್ಕಾರ ಸಾಗರ ಮಾಲಾ ಯೊಜನೆ ಅಡಿಯಲ್ಲಿ ಕರಾವಳಿ ಬಂದರು ಅಭಿವೃದ್ಧಿ ಗೆ 1774 ಕೋಟಿ ರೂ. ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಅಭಿವೃದ್ದಿಗೆ ಸಿಆರ್ ಝಡ್ ನಿಯಮಗಳಿಗೆ ವಿನಾಯಿತಿಗೆ ಕೇಂದ್ರ ಸರ್ಕಾರ ಅನುಮೋದನೆ ಕೊಟ್ಟಿದೆ. ಇಡೀ ದೇಶದಲ್ಲಿ ರಾಜ್ಯದ ಕಡಲು ತೀರದ ಅಭಿವೃದ್ದಿ, ಉದ್ಯೋಗ,ಆರ್ಥಿಕತೆ ಮತ್ತು ಹೆಚ್ಚಿನ ಮಟ್ಟದ ವ್ಯಾಪಾರ ವಹಿವಾಟು ಕರ್ನಾಟಕದ ಕರಾವಳಿ ಭಾಗದಲ್ಲಿ ಆಗಲಿದೆ.

ಕರಾವಳಿ ಜಿಲ್ಲೆಗಳಲ್ಲಿ ನವೀಕರಿಸಬಹುದಾದ ಇಂಧನ ಕ್ಷೇತ್ರದಲ್ಲಿ ಮುಂದಿನ 5 ವರ್ಷದಲ್ಲಿ 2 ಲಕ್ಚ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಪ್ರಧಾನ ಮಂತ್ರಿಯವರು ನಾಡಿದ್ದು ಬೆಂಗಳೂರಿಗೆ ಆಗಮಿಸಿ ವಂದೇ ಭಾರತ ರೈಲಿಗೆ ಚಾಲನೆ ನೀಡಲಿದ್ದಾರೆ. ಕೊಂಕಣ ರೈಲಿನ ವಿದ್ಯುದೀಕರಣ ಯೋಜನೆ ರಾಜ್ಯವನ್ನು ಉತ್ತರ ಭಾರತಕ್ಕೆ ಸಂಪರ್ಕ ಕಲ್ಪಿಸಲಿದೆ. ಮಂಗಳೂರು, ಕಾರವಾರ ಬಂದರುಗಳನ್ನು ಪ್ರಮುಖ ನಗರಗಳಿಗೆ ಜೋಡಿಸುವ ಗತಿ ಶಕ್ತಿ ಯೋಜನೆ ಕೈಗೊಳ್ಳಲಾಗುತ್ತಿದೆ . ಪ್ರಧಾನಿ ಮೋದಿಯವರು 5 ಬಿಲಿಯನ್ ಡಾಲರ್ ಆರ್ಥಿಕತೆಯ ಕನಸು ಹೊಂದಿದ್ದು, ಅದರಲ್ಲಿ ಕರ್ನಾಟಕ ರಾಜ್ಯ 1 ಲಕ್ಷ ಬಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಇದೆ ಎಂದರು.

RELATED ARTICLES

Related Articles

TRENDING ARTICLES